ಕೊರಟಗೆರೆ: ಶಾಲೆಯಲ್ಲಿ ನಡೆದಿರುವ ಅವ್ಯವಹಾರದಿಂದ ಮುಖ್ಯಶಿಕ್ಷಕ(ಕಿ) ಹುದ್ದೆಯ ಪ್ರಭಾರ ವಹಿಸಿಕೊಳ್ಳಲು ಶಾಲೆಯ ಶಿಕ್ಷಕರು ಹಿಂದೇಟು ಹಾಕುತ್ತಿದ್ದರು, ಮಧುಗಿರಿ ಡಿಡಿಪಿಐ ಅವರು ಹಾಲಿ ಇರುವ ಮುಖ್ಯಶಿಕ್ಷಕಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ವಿಶೇಷ ಮುತುವರ್ಜಿ ವಹಿಸಿ ಶಿಕ್ಷಕರ ಮೇಲೆ ಒತ್ತಡ ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ತಾಲ್ಲೂಕಿನ ದಾಸರಹಳ್ಳಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಗಳಾ.ಎಂ. ಅವರಿಗೆ ಸರ್ಕಾರ ಪದೋನ್ನತಿ ನೀಡಿ ಚಿತ್ರದುರ್ಗಕ್ಕೆ ವರ್ಗಾಯಿಸಿದೆ, ಪದೋನ್ನತಿ ಪಡೆದಿರುವ ಮಂಗಳಾ.ಎಂ. ಅವರ ಕರ್ತವ್ಯವನ್ನು ವಹಿಸಲು ಶಿಕ್ಷಕರು ಆಸಕ್ತಿ ತೋರದೇ ಇರುವುದರಿಂದಾಗಿ ಸ್ವತಃ ಡಿಡಿಪಿಐ ಅವರೇ ಶಿಕ್ಷಕರಿಗೆ ಕರೆ ಮಾಡಿ ಪ್ರಭಾರ ವಹಿಸಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ತಪಾಸಣೆ ಇಲ್ಲದೆ ಕರ್ತವ್ಯ ವಹಿಸಿಕೊಳ್ಳಲು ಪ್ರಭಾವ
ಕಳೆದ ಐದು ವರ್ಷದಿಂದ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಗಳಾ.ಎಂ ಅವರು ಶಾಲಾಭಿವೃದ್ಧಿ ಅನುದಾನ ದುರುಪಯೋಗ, ದಾಖಲೆಗಳ ಅಸರ್ಮಪಕ ನಿರ್ವಹಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾಮಸ್ಥರು ಮಧುಗಿರಿ ಡಿಡಿಪಿಐಗೆ ದೂರು ನೀಡಿದ್ದಾರೆ.
ಎಸ್ ಡಿಎಂಸಿ ಅಧ್ಯಕ್ಷರು ಖಾಲಿ ಚೆಕ್ ಗಳ ಮೇಲೆ ಸಹಿಪಡೆದು ಶಾಲಾಭಿವೃದ್ಧಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮಧುಗಿರಿ ಡಿಡಿಪಿಐಗೆ ದೂರು ನೀಡಿದ್ದರು ಸಹ ತನಿಖೆ ನಡೆಸಲು ಮುಂದಾಗದ ಡಿಡಿಪಿಐ ಮಂಜುನಾಥ್ ಅವರು ಪದೋನ್ನತಿ ಪಡೆದಿರುವ ಮಂಗಳಾ.ಎಂ.ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಒತ್ತಡ ಹಾಕುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪದೋನ್ನತಿ ಮತ್ತು ನಿವೃತ್ತಿಯ ಸಂದರ್ಭದಲ್ಲಿ ಡಿಡಿಪಿಐ ಕಚೇರಿಯ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ದಾಖಲಾತಿಗಳ ತಪಾಸಣೆ ನಡೆಸಿದ ನಂತರ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರ ಮಾಡಬೇಕೆಂಬ ನಿಯಮವಿದ್ದರೂ ಸಹ ಡಿಡಿಪಿಐ ಮಂಜುನಾಥ್ ಅವರು ಮುಖ್ಯಶಿಕ್ಷಕಿ ಮಂಗಳಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ವಿಶೇಷ ಕಾಳಜಿ ಮತ್ತು ಮುತುವರ್ಜಿ ತೋರಿಸುತ್ತಿರುವುದರ ಹಿಂದಿನ ಹಕೀಕತ್ತು ಏನು ಎಂಬುದು ತಾಲ್ಲೂಕಿನ ಶಿಕ್ಷಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.