ಬಿಜೆಪಿ ಅಭ್ಯರ್ಥಿ ಬೆನ್ನುಬಿದ್ದ ಮುದ್ದಹನುಮೇಗೌಡ

ತುಮಕೂರು: ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವುಕ್ಕೆ ಮುಜುಗರ ಅನುಭವಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ ಅವರು ಕುಣಿಗಲ್ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರು ಸಹ ಟಿಕೆಟ್ ಸಿಕ್ಕಿರಲಿಲ್ಲ, ಇದರಿಂದ ಮರಳಿ ಗೂಡಿಗೆ ಬಂದಿರುವ ಮುದ್ದಹನುಮೇಗೌಡರಿಗೆ ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ ವಿರುದ್ಧ ಮಾಡಿದ ಟೀಕೆಗಳೇ ಮುಳುವಾಗಿ ಕಾಡುತ್ತಿವೆ ಎನ್ನಲಾಗುತ್ತಿವೆ.

 ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರವಷ್ಟೇ ಅಲ್ಲದೇ ಪಕ್ಕದ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಿ, ಜಿಲ್ಲಾ ಕಾಂಗ್ರೆಸ್ ಮುಖಂಡರ ಪ್ರಖರ ವಾಗ್ದಾಳಿ ನಡೆಸಿದ್ದು, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಿಂದಲೇ ಲೋಕಸಭಾ ಕಣಕ್ಕೆ ಇಳಿದಿರುವ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಿದ ಮಾತುಗಳೇ ಮುಳುವಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದರಿಂದ ಆಕ್ರೋಶ ಗೊಂಡಿದ್ದ ಪರಂ ಅಭಿಮಾನಿಗಳನ್ನು ಸಮಾಧಾನ ಪಡಿಸಲು ಹೆಣಗಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸೋಮಣ್ಣ ಬೆನ್ನಿಗೆಬಿದ್ದ ಎಸ್ಪಿಎಂ: ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬೆನ್ನಿಗೆಬಿದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಸೋಮಣ್ಣ ಅವರ ಕಾರ್ಯಕ್ರಮಗಳನ್ನು ಚಾಚು ತಪ್ಪದೇ ಅನುಸರಿಸುತ್ತಿದ್ದಾರೆ. ಮಠ ಮಾನ್ಯಗಳ ಭೇಟಿಯಲ್ಲಿ ಮುಂದಿರುವ ಸೋಮಣ್ಣ ಬೆನ್ನ ಹಿಂದೆಯೇ ಎಸ್ಪಿಎಂ ಮಠಮಾನ್ಯಗಳಿಗೆ ಭೇಟಿ ನೀಡುತ್ತಿದ್ದಾರೆ.

ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠ, ಕುಂಚಿಟಿಗರ ಮಠ, ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠ, ಕಾಡಸಿದ್ದೇಶ್ವರ ಮಠ, ಯಳನಾಡು ಸಿದ್ಧರಾಮೇಶ್ವರ ಮಠಗಳಿಗೆ ಮೊದಲು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭೇಟಿ ನೀಡಿ ಸ್ವಾಮೀಜಿಗಳ ಆರ್ಶೀವಾದವನ್ನು ಪಡೆದ ನಂತರ ಎರಡನೇ ಪಂಕ್ತಿಯಲ್ಲಿ ಮುದ್ಹಹನುಮೇಗೌಡ ಅವರು ಆರ್ಶೀವಾದ ಪಡೆಯಲು ಹೋಗುತ್ತಿದ್ದಾರೆ.

ಕಾಂಗ್ರೆಸ್ ಮುಖಂಡರ ಭೇಟಿಗೆ ವಿರಾಮ: ಲೋಕಸಭಾ ಟಿಕೆಟ್ ಪಡೆದುಕೊಂಡಾಗಿನಿಂದಲೂ ಪಕ್ಷದ  ಜಿಲ್ಲಾ ಕಚೇರಿಗೆ ಬಾರದ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ಮುಖಂಡರ ಭೇಟಿಗೂ ವಿರಾಮ ಹಾಕಿದ್ದಾರೆ. ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ಮನವೊಲಿಸುವುದರೊಂದಿಗೆ ಅಸಮಾಧಾನಗೊಂಡಿರುವ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಿರುವುದನ್ನು ಬಿಟ್ಟರೆ ಉಳಿದ ಕಡೆ ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿಲ್ಲ ಎನ್ನುವ ಆರೋಪಗಳು ಪಕ್ಷದಲ್ಲಿ ಕೇಳಿಬಂದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಸೋಲಿಗೆ ಕಾರಣವಾಗಿದ್ದ ಮುದ್ದಹನುಮೇಗೌಡ ಅವರೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ.

ಕೊರಟಗೆರೆಯಲ್ಲಿ ಸಚಿವದ್ವಯರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಅವರೊಂದಿಗೆ ಸಮಾವೇಶ ನಡೆಸಿ, ಚುನಾವಣೆ ಕಹಳೆ ಊದಿದ್ದ ಮುದ್ದಹನುಮೇಗೌಡರಿಗೆ ನಂತರ ಉತ್ಸಾಹ ಕಡಿಮೆಯಾದಂತೆ ಕಾಣುತ್ತಿದೆ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಪಕ್ಷದ ಪರ ಸಮರ್ಥವಾಗಿ ಬಿಜೆಪಿಗೆ ಕೌಂಟರ್ ಕೊಡುವಂತಹ ಯುವ ನಾಯಕರನ್ನು ಸಂಪರ್ಕಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಪಕ್ಷದೊಳಗೆ ಹರಿದಾಡುತ್ತಿದೆ.

Verified by MonsterInsights