50 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ: ಸಲೀಂ ಅಹ್ಮದ್
ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯತ್ತಿರುವ ಪ್ರಜಾಧ್ವನಿ ಯಾತ್ರೆ ಜ. 19 ರಂದು ಹಾವೇರಿಗೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರ, ಬೆಲೆ ಏರಿಕೆ, ಆಡಳಿತ ವೈಫಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಸ್ ಯಾತ್ರೆ ಆರಂಭವಾಗಿದೆ. ಜ.19 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಮಾರಂಭ ಪ್ರಾರಂಭವಾಗಲಿದ್ದು, 50 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ ಎಂದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ರಣದೀಪ್‌ಸಿಂಗ್ ಸುರ್ಜೆವಾಲ್, ಮಾಜಿ ಶಾಸಕರಾದ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್ ಸೇರಿದಂತೆ ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರು ಭಾಗವಹಿಸಲಿದ್ದಾರೆ.
‘ಈ ಸರ್ಕಾರವು ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದ್ದು, ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಹೀಗಾಗಿ, ಜನರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದಾರೆ. ಹೀಗಾಗಿಯೇ ಯಾತ್ರೆಯು ರಾಜ್ಯದಲ್ಲಿ ಸಂಚಲನ ಮೂಡಿಸಿದೆ’ ಎಂದರು.
‘ಈ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಕಳೆದ ಮೂರನಾಲ್ಕು ವರ್ಷಗಳಿಂದ ಅಧಿಕಾರದಲ್ಲಿ ಇದ್ದರೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರದ ಬಿಜೆಪಿ ನಾಯಕರು ರಾಜ್ಯ ಬಜೆಟ್ ನಂತರ ರಾಜ್ಯಾದ್ಯಂತ ‘ರಥ ಯಾತ್ರೆ ಮಾಡುವುದಾಗಿ ಹೇಳುತ್ತಾರೆ. ಈ ಸರ್ಕಾರಕ್ಕೆ ಕೇವಲ 90 ದಿನಗಳ ಆಯಸ್ಸು ಇದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಪ್ರತಿವರ್ಷ 2 ಕೋಟಿ ಜನರಿಗೆ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಆದರೆ ಎಂಟು ವರ್ಷಗಳ ಅಧಿಕಾರವಧಿಯಲ್ಲಿ 16 ಲಕ್ಷ ಜನರಿಗೂ ಉದ್ಯೋಗ ನೀಡಲು ಆಗಲಿಲ್ಲ. ಬರೀ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಾದ್ಯಂತ ಆಡಳಿತ ವಿರೋಧಿ ಅಲೆ ಎದ್ದಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಆರಂಭಿಸಿರುವ ಪ್ರಜಾಧ್ವನಿ ಯಾತ್ರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ದೊಡ್ಡ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಈ ಯಾತ್ರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧ್ಯಾನ್ಯತೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಪರವಾದ ಬಜೆಟ್ ಅನ್ನು ಪಕ್ಷ ಮಂಡಿಸಲಾಗುತ್ತದೆ ಎಂದರು.
2ನೇ ಹಂತದ ಕಾರ್ಯಕ್ರಮ
‘ಫೆ. 3ರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮುಯ್ಯ ಅವರ ನೇತೃತ್ವದಲ್ಲಿ 2ನೇ ಹಂತದ ಕಾರ್ಯಕ್ರಮ ನಡೆಯಲಿದ್ದು, ಫೆ.4ರಿಂದ ಮಾರ್ಚ್ 11ರವರೆಗೆ ಉತ್ತರ ಕರ್ನಾಟಕ 14 ಲೋಕಸಭಾ ಮತ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ದಿವಸ ಮೂರು ಕ್ಷೇತ್ರಗಳಂತೆ ಪ್ರಚಾರ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಎಂ.ಎಂ ಹಿರೇಮಠ, ನಗರಸಭಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮುಖಂಡರಾದ ಈರಪ್ಪ ಲಮಾಣಿ, ಪ್ರಕಾಶಗೌಡ ಪಾಟೀಲ, ಶಿವಕುಮಾರ್ ತಾವರಗಿ, ಕುಬೇರಪ್ಪ ಸೇರಿದಂತೆ ಇತರರು ಇದ್ದರು.