ಮಧುಗಿರಿ : ಕಳೆದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಸ್ವತಃ ಜಿಲ್ಲಾಧಿಕಾರಿ ಭಾಗವಹಿಸಿದ್ದು ಅವರೇ ನೀಡಿದ ಆದೇಶಕ್ಕೂ ಸಾರಿಗೆ ಇಲಾಖೆ ಕಿಮ್ಮತ್ತು ನೀಡದ ಕಾರಣ ಶಾಲಾ ಮಕ್ಕಳು ತಹಶೀಲ್ದಾರ್ ಕಚೇರಿ ಮುಂಬಾಗ ಧರಣಿ ನಡೆಸಿರುವ ಪ್ರಸಂಗ ನಡೆದಿದೆ.
ತಾಲೂಕಿನ ಐಡಿಹಳ್ಳಿ ಹೋಬಳಿಯ ತಿಪ್ಪಾಪುರ, ತಿಪ್ಪಾಪುರ ತಾಂಡ, ದಾದಗೊಂಡನಹಳ್ಳಿ ಮೂಲಕ ಯಲ್ಕೂರು ಮಾರ್ಗವಾಗಿ ಶಾಲೆಗೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಗಿಡದಾಗಲಹಳ್ಳಿಯಲ್ಲಿ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿ ಬೇಗ ಶಾಲಾ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಡಿಸಿ ವೈ.ಎಸ್,ಪಾಟೀಲ್ ಸೂಚಿಸಿದ್ದರು.
ಆದರೆ ತಿಂಗಳಾದರೂ ಈ ಬಗ್ಗೆ ಇಲಾಖೆ ಕ್ರಮವಹಿಸಿರಲಿಲ್ಲ. ಹಾಗೂ ಈ ಬಾರಿಯ ಜಿಲ್ಲಾಧಿಕಾರಿ ಕಾರ್ಯಕ್ರಮ ಹನುಮಂತಪುರದಲ್ಲಿ ನಡೆದಾಗ ಅಲ್ಲಿಯೂ ಈ ಬಗ್ಗೆ ಪ್ರಸ್ತಾಪವಾಗಿತ್ತು. ಆಗ ತಹಶೀಲ್ದಾರ್ ಸಾರಿಗೆ ಅಧಿಕಾರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಇಲಾಖೆಯ ನಿರ್ಲಕ್ಷವನ್ನು ಸಹಿಸಿಕೊಂಡ ಮಕ್ಕಳ ಕೋಪದ ಕಟ್ಟೆ ಒಡೆದ ಪರಿಣಾಮ ಹೋರಾಟಗಾರ ಮೈಲಾರಪ್ಪ, ಬಾಲಕೃಷ್ಣ ನೇತೃತ್ವದಲ್ಲಿ
ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರ, ಅಧಿಕಾರಿಗಳು, ಹಾಗೂ ಜನಪ್ರತಿನಿದಿಗಳ ವಿರುದ್ಧ ಘೋಷಣೆ ಕೂಗಿದರು.
ಮಕ್ಕಳಿಗಿಲ್ಲ ಸಾರಿಗೆ ಸೌಲಭ್ಯ
ಸದರಿ ಮಾರ್ಗವಾಗಿ ಸುಮಾರು 85 ಮಕ್ಕಳು 4 ರಿಂದ 6 ಕಿ.ಮೀ. ಗ್ರಾಮದಿಂದ ಶಾಲೆಗೆ ನಡೆದುಕೊಂಡು ಹೋಗುತ್ತಾರೆ. ಹಾಗೂ ಗ್ರಾಮಗಳಿಂದ ಮಧುಗಿರಿಗೆ ಬರುವ ಕಾಲೇಜು ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಶೈಕ್ಷಣಿಕವಾಗಿ ಸಮಸ್ಯೆಯಾಗಿತ್ತು. ಇದಕ್ಕಾಗಿ ಹಲವು ಬಾರಿ ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸದ ಕಾರಣ ಇಂದು 4 ನೂರಷ್ಟು ಜನರು ಮಕ್ಕಳೊಂದಿಗೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಬಗ್ಗೆ ಮಾತನಾಡಿದ ಹೋರಾಟಗಾರ ಮೈಲಾರಪ್ಪ ಕಳೆದ ಮೇ.ನಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯನವರ ಕೋರಿಕೆಯಂತೆ ಸಾರಿಗೆ ಸಚಿವ ಶ್ರೀರಾಮುಲು ರವರು ತಿಪ್ಪಾಪುರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಅದು ತಿಪ್ಪಾಪುರ ಗ್ರಾಮದೊಳಗೆ ಬರುತ್ತಿಲ್ಲ. ಇಲ್ಲಿ ಹಿಂದೆ 8ನೇ ತರಗತಿಯ ಪಾಠ ನಡೆಯುತ್ತಿದ್ದು, ಸಾರಿಗೆ ವ್ಯವಸ್ಥೆಯಿಲ್ಲದೆ ಮಕ್ಕಳ ಕೊರತೆಯಿಂದ ತರಗತಿ ಮುಚ್ಚಿದೆ. ಈಗ ಪ್ರಸ್ತುತ 50-60 ಮಕ್ಕಳು ಪ್ರೌಢಶಾಲೆಗೆ 4 .ಕಿ.ಮೀ. ನಡೆದೇ ಹೋಗುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಇದ್ದಾರೆ. ಇವರಿಗಾಗಿ ಬೆಳಿಗ್ಗೆ 8.30 ಕ್ಕೆ ಬಸ್ ನೀಡಿದರೆ ಐಡಿಹಳ್ಳಿ, ತಿಪ್ಪಾಪುರ, ತಿಪ್ಪಾಪುರ ತಾಂಡ, ದಾದಗೊಂಡನಹಳ್ಳಿ, ಯಲ್ಕೂರು, ಗರಣಿ, ಹೊಸಕೆರೆ ಮಾರ್ಗವಾಗಿ ಮಧುಗಿರಿಗೆ ಬಂದು ಸಂಜೆ ಮತ್ತೆ ಸಂಚರಿಸುವ ಮಾರ್ಗ ನೀಡಬೇಕೆಂದು ಆಗ್ರಹಿಸಿದರು.
ತಹಶೀಲ್ದಾರ್ ಭರವಸೆ : ಧರಣಿ ಕೈಬಿಟ್ಟ ಮಕ್ಕಳು
ಪ್ರಸ್ತುತ ಈ ಸಮಸ್ಯೆಯನ್ನು ಒಂದು ವಾರದಲ್ಲಿ ಬಗೆಹರಿಸಿಕೊಡುತ್ತೇವೆ. ಈ ಬಗ್ಗೆ ಸಾರಿಗೆ ಇಲಾಖೆಯ ಮೇಲ್ವಿಚಾರಕ ರಾಮಚಂದ್ರಪ್ಪ ಭರವಸೆ ನೀಡಿದ್ದು, ಮಕ್ಕಳು ಧರಣಿ ಕೈಬಿಡುವಂತೆ ತಹಶೀಲ್ದಾರ್ ಸುರೇಶಾಚಾರ್ ಮಾಡಿದ ಮನವಿಗೆ ಸ್ಪಂದಿಸಿದ ಮಕ್ಕಳು ಧರಣಿ ಕೈಬಿಟ್ಟರು.
ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಕೆಂಪರಾಜು, ದಲಿತ ಮುಖಂಡರಾದ ಅಂಜಯ್ಯ, ಶಿವಕುಮಾರ್, ಬಸರೆಡ್ಡಿ, ಪಚಲಪ್ಪ, ಆನಂದ, ರಮೇಶ್, ರವಿ, ನಂಜಪ್ಪ, ಹಾಗೂ ಗ್ರಾಮಸ್ಥರು, ಮಕ್ಕಳು ಇದ್ದರು.