ತುಮಕೂರು: ಡ್ಯೂಟಿ ಹಾಕಿಕೊಡಲು ಹೋಂಗಾರ್ಡ್ ಕಮಾಂಡೆಂಟ್ ಲಂಚ ಕೇಳಿ ಕಿರುಕುಳ ನೀಡಿದ್ದ ಬೇಸತ್ತ ಹೋಂಗಾರ್ಡ್ ಸಿಬ್ಬಂದಿ ಕಚೇರಿ ಮುಂದಿದ್ದ ಆಲದ ಮರ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಹೋಂಗಾರ್ಡ್ ನಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಊರ್ಡಿಗೆರೆಯ ಜಯಣ್ಣ ಎಂಬ ಸಿಬ್ಬಂದಿ ನನ್ನ ಸಾವಿಗೆ ಹೋಂಗಾರ್ಡ್ ಕಮಾಂಡೆಂಟ್ ಪಾತಣ್ಣನೇ ಕಾರಣ ಎಂದು ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ.
ಇಂದು ಬೆಳಂಬೆಳಿಗ್ಗೆ ಹೋಂಗಾರ್ಡ್ ಕಚೇರಿ ಮುಂಭಾಗದಲ್ಲಿರುವ ಆಲದ ಮರವನ್ನು ಹಗ್ಗದೊಂದಿಗೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಮನವೊಲಿಸಿದ ನಂತರ ಮರದಿಂದ ಕೆಳಗೆ ಇಳಿದಿದ್ದಾನೆ.
ಡ್ಯೂಟಿಗೆ ಲಂಚ: ಗೃಹರಕ್ಷಕರಿಗೆ ಕೆಲಸ ನೀಡಲು ಪ್ರತಿ ತಿಂಗಳು 2500 ರೂ ಕೊಡಬೇಕಾಗಿದ್ದು, ಹಣ ನೀಡದವರಿಗೆ ಡ್ಯೂಟಿ ಕೊಡುವುದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ಊರ್ಡಿಗೆರೆಯ ಜಯಣ್ಣ ಸುಮಾರು ವರ್ಷಗಳಿಂದ ಗೃಹರಕ್ಷಕ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸಿದ್ದು, ಉತ್ತಮ ಸಿಬ್ಬಂದಿ ಎಂದು ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆಯಲ್ಲಿ ಪ್ರಶಂಸನಾಪತ್ರವನ್ನು ಪಡೆದುಕೊಂಡಿದ್ದಾರೆ.
ಉತ್ತಮ ಈಜುಗಾರನಾಗಿರುವ ಜಯಣ್ಣ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಮೃತದೇಹಗಳನ್ನು ಹೊರ ತೆಗೆಯುವ ಕೆಲಸವನ್ನು ಮಾಡುತ್ತಿದ್ದರು, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದರು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ನಿಯಮದ ಪ್ರಕಾರ ಡ್ಯೂಟಿ ಕೊಡದೇ ಇದ್ದರಿಂದ ಬೇಸತ್ತ ಜಯಣ್ಣ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ.