ಪ್ರತಿ ನಿತ್ಯ ದ್ವಜಾರೋಹಣ ಮಾಡಬೇಕೆಂದು ತಿಳಿದಿಲ್ಲವೆಂದ ಪಿಡಿಓ !!
ಕೊರಟಗೆರೆ; ತಾಲ್ಲೂಕಿನ ಸಿ ಎನ್ ದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯತಿ ಕಾರ್ಯದಲ್ಲಿ ರಾಷ್ಟ್ರದ್ವಜಸಂಹಿತೆ ಉಲ್ಲಂಘನೆ ಮಾಡಿರುವ ಘಟನೆ ನಡೆದಿದೆ.
ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು ತಮ್ಮ ಕಾರ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಧ್ವಜ ಸ್ತಂಭದಲ್ಲಿ ಪ್ರತಿ ದಿನ ಧ್ವಜಾರೋಹಣಕ್ಕೆ ಸಂಬಂಧಿಸಿದ ನೀತಿ ನಿಯಮಗಳಂತೆ ಘನತೆ ಮತ್ತು ಗೌರವಯುತವಾಗಿ ತ್ರಿವರ್ಣಧ್ವಜ ಹಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಈ ಕುರಿತು ಸುತ್ತೋಲೆ (ಸಂಖ್ಯೆ: ಗ್ರಾಅಪ 116 ಜಿಪಸ 2013 (ಪಿ-1)ಯನ್ನು 30.7.2013 ರಂದು ಆದೇಶ ಹೊರಡಿಸಿದ್ದಾರೆ.
ಆದರೆ ಬೂದಗವಿ ಗ್ರಾಮ ಪಂಚಾಯತಿಯಲ್ಲಿ ಎರಡು ವರ್ಷಗಳಿಂದ ರಜಾದಿನಗಳಲ್ಲಿ ದ್ವಜಹಾರಿಸಲು ಆದೇಶವಿಲ್ಲ, ಕಛೇರಿದಿನಗಳಲ್ಲಿ ದ್ವಜ ಹಾರಿಸುತ್ತೇವೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸರ್ಕಾರದ ಆದೇಶ ಸುತ್ತೋಲೆಗಳು ನಮಗೆ ತಿಳಿದಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ.
ಸರ್ಕಾರದಲ್ಲಿ ರಾಷ್ಟ್ರ ಧ್ವಜ ಪ್ರದರ್ಶನವನ್ನು ಲಾಂಛನ ಮತ್ತು ಅಭಿದಾನ ಕಾಯಿದೆ 1950 ಮತ್ತು ರಾಷ್ಟ್ರ ಘನತೆಯ ಅಪಮಾನ ತಡೆ ಕಾಯಿದೆ 1971ರ ಅನುಗುಣವಾಗಿ ಭಾರತ ಧ್ವಜ ಸಂಹಿತೆ 2002 ಅನ್ನು ರೂಪಿಸಿದೆ. ರಾಷ್ಟ್ರ ಧ್ವಜ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳು, ಆಚರಣೆ, ಸಂಪ್ರದಾಯ ಮತ್ತು ಸೂಚನೆಗಳು ಸಂಹಿತೆ ಒಳಗೊಂಡಿದೆ. ಮಾರ್ಗಸೂಚಿಯಲ್ಲಿ ತಿಳಿಸಿರುವ ಶಿಷ್ಠಾಚಾರ ಮತ್ತು ನಿಯಮ ಆಧರಿಸಿ, ರಾಷ್ಟ್ರ ಧ್ವಜವನ್ನು ಪ್ರತಿ ನಿತ್ಯ ರಾಜ್ಯದ ಎಲ್ಲ ಗ್ರಾ.ಪಂ., ತಾ.ಪಂ., ಜಿ.ಪಂ. ಕಚೇರಿಯ ಆವರಣದ ಧ್ವಜ ಸ್ತಂಭದ ಮೇಲೆ ತಪ್ಪದೇ ಪ್ರದರ್ಶಿಸಲು ಸಂಬಂಧಿಸಿದ ಕಚೇರಿ ಮುಖ್ಯಸ್ಥರು ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಸೂಚಿಸಿದ್ದಾರೆ.
ಗ್ರಾ.ಪಂ.ಗಳಲ್ಲಿ ಪಿಡಿಒ ನೇತೃತ್ವದಲ್ಲಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್, ವಾಟರ್‌ಮನ್‌ಗಳ ಸಮನ್ವಯತೆಯೊಂದಿಗೆ ರಾಷ್ಟ್ರ ಧ್ವಜ ಆರೋಹಣ ಹಾಗೂ ಅವರೋಹಣ ಜವಾಬ್ದಾರಿ ನಿರ್ವಹಿಸಬೇಕು.
ಭಾರತದ ಧ್ವಜ ಸಂಹಿತೆ 2002 ರ ಪ್ರಕಾರ ಧ್ವಜ ಪ್ರದರ್ಶನಕ್ಕೆ ನಿಗದಿಪಡಿಸಿರುವ ನಿಬಂಧನೆಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು. ಯಾವುದೇ ಸಂದರ್ಭದಲ್ಲೂ ಧ್ವಜದ ಗೌರವ ಮತ್ತು ಘನತೆಗೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಆದೇಶಿಸಿದ್ದಾರೆ.
ಆದರೆ ಕೊರಟಗೆರೆ ತಾಲ್ಲೂಕಿನಲ್ಲಿ ಮಾತ್ರ ಯಾವುದೇ ಸರ್ಕಾರಿ ಸುತ್ತೋಲೆಗಳನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಾರೆ. ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಮಾತ್ರ ಕಂಡರು ಕಾಣದಂತೆ ವರ್ತಿಸುವುದು ವಿಪರ್ಯಾಸವೇ ಸರಿ.
ಇಂತಹ ಗ್ರಾಮ ಪಂಚಾಯ್ತಿಗಳು ಒಂದಲ್ಲ,ಎರಡಲ್ಲ ಸುಮಾರು ಗ್ರಾಮಪಂಚಾಯತಿ ಕಛೇರಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಸಾರ್ವಜನಿಕರು ಸಾಕಷ್ಟು ಸಲ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದರೆ ಕೇಳೋರು ಯಾರು ಹೇಳೇರು ಯಾರು?
ಈ ಹಿಂದೆಯು ಸಹ ಬೂದಗವಿ ಗ್ರಾಮ ಪಂಚಾಯ್ತಿಯಲ್ಲಿ ರಾತ್ರಿಯಲ್ಲ ರಾಷ್ಟ್ರದ್ವಜವನ್ನು ದ್ವಜಸ್ಥಂಭದಲ್ಲೇ ಬಿಟ್ಟು ದ್ವಹಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಗ್ರಾ ಪಂ ನಲ್ಲಿ ಪದೇ ಪದೇ ಈರೀತಿ ನಡೆಯುತ್ತಿರುವುದು ಜಿಲ್ಲಾಪಂಚಾಯತ್ ಹಾಗೂ ಜಿಲ್ಲಾಆಡಳಿತಕ್ಕೆ ಅಗೌರವ ಮಾಡಿದಂತಾಗಿದೆ. ಇನ್ನಾದರೂ ಕ್ರಮ ಕೈಗೊಳ್ಳುತ್ತಾರ ಕಾಯ್ದು ನೋಡಬೇಕಿದೆ.