ಜಿಲ್ಲೆಯನ್ನು ಸಂಪೂರ್ಣ ಬಿಜೆಪಿಮಯವಾಗಿಸಲು ಯೋಜನೆ ರೂಪಿಸಿರುವ ಬಿಜೆಪಿ ಮುಖಂಡರು, ಜಿದ್ದಾಜಿದ್ದಿನ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ತಂತ್ರಗಾರಿಕೆಯನ್ನು ರೂಪಿಸಿದ್ದು, ಬಿ.ಸುರೇಶ್ ಗೌಡ ಅವರನ್ನು ಗೆಲ್ಲಿಸಲು ಬಿಜೆಪಿ ಗೆಲುವಿನ ಸರದಾರ ಬಿ.ವೈ.ವಿಜಯೇಂದ್ರ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.
ಈಗಾಗಲೇ ಮಹಾಲಕ್ಷ್ಮೀ ಲೇಔಟ್ ಶಾಸಕ, ಸಚಿವರು ಆಗಿರುವ ಗೋಪಾಲಯ್ಯ ಅವರನ್ನು ಅಧಿಕೃತವಾಗಿ ಗ್ರಾಮಾಂತರ ಉಸ್ತುವಾರಿಯನ್ನಾಗಿ ನೇಮಿಸಿದ್ದು, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಗೋಪಾಲಯ್ಯ ಅವರು ಈಗ ಬಿಜೆಪಿಯಲ್ಲಿರುವುದು ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ.
ಗೋಪಾಲಯ್ಯ ಅವರೊಂದಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗ್ರಾಮಾಂತರದಲ್ಲಿ ಕಮಲ ಅರಳಿಸುವ ಜವಾಬ್ದಾರಿಯನ್ನು ಹೊರಲಿದ್ದಾರೆ ಎನ್ನಲಾಗಿದ್ದು, ನಾಳೆ ಬಿವೈ ವಿಜಯೇಂದ್ರ ಅವರಿಂದಲೇ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸುವ ಮೂಲಕ ವೀರಶೈವ ಲಿಂಗಾಯತ ಮತಗಳನ್ನು ಕ್ರೂಢಿಕರಿಸಲು ಬಿಜೆಪಿ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.