ತುಮಕೂರು: ನಗರದಲ್ಲಿ ಕೇಸರಿ ಪ್ರವಾಹದ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದ್ದು, ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮೂಲಕ ತುಮಕೂರು ನಗರ ಮತ್ತು ಗ್ರಾಮಾಂತರದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ನಗರದ ಅರ್ಧನಾರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಜ್ಯೋತಿಗಣೇಶ್ ಮತ್ತು ಮಾಜಿ ಶಾಸಕ ಸುರೇಶ್ ಗೌಡ ಅವರು ರಾಜ್ಯಸಭಾ ಸದಸ್ಯ ಜಗ್ಗೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಅರಕೆರೆ ರವೀಶ್ ಜೊತೆಗೆ ಭರ್ಜರಿ ರೋಡ್ ಶೋ ನಡೆಸಿದರು.
ಅರ್ಧ ನಾರೇಶ್ವರ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವೆರೆಗೆ ನಡೆದ ರೋಡ್ ಶೋನಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿದ್ದ ನಗರ ಚುನಾವಣಾಧಿಕಾರಿಗಳ ಕಚೇರಿಗೆ ತೆರೆಳಿದ ಶಾಸಕ ಜ್ಯೋತಿಗಣೇಶ್ ನಾಮಪತ್ರ ಸಲ್ಲಿಸಿದರು.
ಎರಡು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ ನಗರದಲ್ಲಿ ಕೇಸರಿ ಕಲರವ ಹೆಚ್ಚಾಗಿದ್ದು, ಕಾರ್ಯಕರ್ತರು ಉತ್ಸಾಹ ಮೇರೆ ಮೀರಿ ಗ್ರಾಮಾಂತರ ಅಭ್ಯರ್ಥಿ ಸುರೇಶ್ ಗೌಡ ಅವರನ್ನು ಹೊತ್ತು ಮೆರವಣಿಗೆ ನಡೆಸಿದರು.