ಬಿಜೆಪಿ ಶಾಸಕರು ಡಿಕೆಶಿ ಸಂಪರ್ಕದಲ್ಲಿಲ್ಲ: ಓಲೇಕಾರ್

ಹಾವೇರಿ: ಜಿಲ್ಲೆಯ ಯಾವ ಬಿಜೆಪಿ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಂಪರ್ಕದಲ್ಲಿ ಇಲ್ಲಾ. ವಿನಾಕಾರಣ ಊಹಾಪೋಹಗಳನ್ನು ಹಬ್ಬಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರು ಹೇಳಿದ ಮಾತಿನಲ್ಲಿ ಸತ್ಯಾಂಶವಿದ್ದರೆ ಯಾವ ಶಾಸಕರು ಅವರ ಸಂಪರ್ಕದಲ್ಲಿದ್ದಾರೆ? ಏನು ಮಾತುಕತೆಯಾಗಿದೆ ಎಂಬುವುದನ್ನು ಬಹಿರಂಗ ಪಡಿಸಲಿ ಎಂದು ಶಾಸಕ ನೆಹರು ಓಲೇಕಾರ ಡಿಕೆಶಿಗೆ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಡಿಕೆಶಿ ಸಿಎಂ ತವರು ಜಿಲ್ಲೆಯ ಶಾಸಕರು ಕಾಂಗ್ರೆಸ್ ಸೇರಲು ನನ್ನ ಸಂಪರ್ಕದಲ್ಲಿ ಇದ್ದಾರೆ. ಪಕ್ಷದಲ್ಲಿ ಅವರು ಕೂರಲು ಚೇರ್ ಖಾಲಿ ಇಲ್ಲದ ಕಾರಣ ಅವರಿಗೆ ಸ್ವಲ್ಪ ದಿನಗಳ ಕಾಲ ತಡೆಯುವಂತೆ ಸೂಚಿಸಿದ್ದೇನೆ ಎಂದು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದರು.

ಗಿಡಕ್ಕೆ ಕಲ್ಲು ಹೊಡೆದು ನೋಡುವ ಕೆಲಸವನ್ನು ಡಿಕೆಶಿ ಮಾಡುತ್ತಾರೆ. ಮುಂಜಾನೆ ಒಂದು ಹೇಳಿಕೆ ನೀಡಿದರೆ ಸಂಜೆ ಮತ್ತೊಂದು ರೀತಿಯ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ತೊರೆದು ಅನೇಕರು ಬಿಜೆಪಿ ಸೇರುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್ ಸೇರುವ ಪ್ರಶ್ನೆ ಉದ್ಭವಿಸುವುದಿಲ್ಲ. ಬಿಜೆಪಿಯ ಯಾವ ಶಾಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇಲ್ಲಾ. ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಅವರು ಬಿಜೆಪಿ ನಾಯಕರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಡಿಕೆಶಿ ಕಾಂಗ್ರೆಸ್ ರಾಜ್ಯ ನಾಯಕನಾಗಿದ್ದರೂ ಅವರ ಮಾತಿನಲ್ಲಿ ಹಿಡಿತವಿಲ್ಲಾ. ಸುಳ್ಳು ಮಾತುಗಳನ್ನು ಆಡಿ ಅವರ ಗೌರವವನ್ನು ಅವರೆ ಹಾಳು ಮಾಡಿಕೊಂಡಿದ್ದಾರೆ. ನಾನು ವೈಯಕ್ತಿಕವಾಗಿ ಅವರ ಸಂಪರ್ಕದಲ್ಲಿ ಇಲ್ಲಾ ಎಂದು ಸ್ಪಷ್ಟಪಡಿಸಿದರು.

ನಗರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ 1,112 ಜಿ+ ಮಾದರಿ ಮನೆಗಳನ್ನು ಮಾಜಿ ಸಚಿವ ರುದ್ರಪ್ಪ ಲಮಾಣಿ ಅಧಿಕಾವಧಿಯಲ್ಲಿ ₹ 25 ರಿಂದ 30 ಸಾವಿರ ಲಂಚ ಪಡೆದು ಮನೆ ಇದ್ದವರು ಹಾಗೂ ಗ್ರಾಮೀಣ ಭಾಗದಲ್ಲಿ ವಾಸವಾಗಿರುವವರು ಸೇರಿದಂತೆ ಸುಮಾರು 700 ಕ್ಕೂ ಅಧಿಕ ಜನರಿಗೆ ಹಂಚಿಕೆ ಮಾಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಪರಿಶೀಲನೆ ಮಾಡಿಸಿದಾಗ ಸತ್ಯಾಂಶ ಗೊತ್ತಾಗಿದೆ. ಹಾಗಾಗಿ ಫಲಾನುಭವಿಗಳ ಪಟ್ಟಿಯನ್ನು ಪುನಃ ತಯಾರಿಸಿ ಮನೆ ಇಲ್ಲದವರು ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಹೊಸದಾಗಿ ಹಂಚಿಕೆ ಮಾಡಲಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದರು.

ಮೆಡಿಕಲ್ ಕಾಲೇಜ್ ನ ಮೊದಲ ಹಂತ ಪೂರ್ಣಗೊಂಡಿದ್ದು, ಅತೀ ಶೀಘ್ರವಾಗಿ ಉದ್ಘಾಟಿಸಲಾಗುತ್ತದೆ. ನಗರದ ಪ್ರವಾಸಿ ಮಂದಿರ ನಿರ್ಮಾಣಕ್ಕೆ ₹ 10 ಕೋಟಿ ಹಾಗೂ ಗುತ್ತಲ ಪ್ರವಾಸಿ ಮಂದಿರ ನಿರ್ಮಾಣಕ್ಕೆ ₹3 ಕೋಟಿ ಹಣ ಮಂಜೂರಾಗಿದೆ. ಹಾವೇರಿ- ಗುತ್ತಲ ರಸ್ತೆ ನಿರ್ಮಾಣಕ್ಕೆ ₹ 20 ಕೋಟಿ ಮಂಜೂರಾಗಿದ್ದು, ಶೀಘ್ರವಾಗಿ ಟೆಂಡರ್ ಕರೆಯಲಾಗುತ್ತದೆ ಎಂದರು.

ಗೆಲ್ಲುವ ಕುದುರೆಗೆ ಬಿಜೆಪಿ ಟಿಕೆಟ್: ಹಾವೇರಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆ ನಾನೆ, ನನ್ನನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡುತ್ತಾರೆ? ಚುನಾವಣೆ ಎಂದ ಮೇಲೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ವಿಧಾನಸಭಾ ಚುನಾವಣೆಯು ಮಹತ್ವದ ಚುನಾವಣೆಯಾಗಿದ್ದು, ಕ್ಷೇತ್ರದಲ್ಲಿ ಗೆಲ್ಲುವ ಕುದುರೆ ನಾನೆ. ಹೀಗಾಗಿ ಟಿಕೆಟ್‌ನ್ನು ವರಿಷ್ಠರು ನನಗೆ ನೀಡುತ್ತಾರೆ ಎಂದರು.

ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿರುವೆ. ಚುನಾವಣೆ ಹತ್ತಿರ ಬಂದಾಗ ಆಕಾಂಕ್ಷಿಗಳು ಇರುತ್ತಾರೆ. ಕಳೆದ ಚುನಾವಣೆಯಲ್ಲಿ 16ಕ್ಕೂ ಅಧಿಕ ಸಂಖ್ಯೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ ಪ್ರಸಕ್ತ ಚುನಾವಣೆಯ ಸಂದರ್ಭದಲ್ಲಿ ಈ ಸಂಖ್ಯೆ 14ಕ್ಕೆ ಇಳಿದಿದೆ. ಟಿಕೆಟ್ ಆಕಾಂಕ್ಷಿಗಳೂ ನಮ್ಮವರೆ ಆಗಿದ್ದಾರೆ. ಯಾರೇ ಆಕಾಂಕ್ಷಿಗಳಾಗಿದ್ದರೂ ವರಿಷ್ಠರು ನನಗೆ ಬಿಜೆಪಿ ಟಿಕೆಟ್ ನೀಡುತ್ತಾರೆ ಎಂದು ಶಾಸಕ ನೆಹರು ಓಲೇಕಾರ ವಿಶ್ವಾಸ ವ್ಯಕ್ತಪಡಿಸಿದರು.

Verified by MonsterInsights