ಸಿರಿಧಾನ್ಯದಲ್ಲಿದೆ ಆರೋಗ್ಯ: ವೈ.ಎಸ್. ಪಾಟೀಲ್

ಪುರಾತನ ಅಧ್ಯಯನದ ವರದಿಯನ್ವಯ ಕ್ರಿ.ಪೂ.4500 ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತು. ಒಣಭೂಮಿ ಬೆಳೆಯಾಗಿರುವುದರಿಂದ ಸಿರಿಧಾನ್ಯಗಳನ್ನು ಕಡಿಮೆ ಮಳೆ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.

ತುಮಕೂರು: ದಿನನಿತ್ಯದ ಆಹಾರಕ್ಕಿಂತಲೂ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದ “ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಕಾರ್ಯಾಗಾರ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯಗಳು ನಮ್ಮ ದೇಶದ ಪಾರಂಪರಿಕ ಬೆಳೆಯಾಗಿದ್ದು, ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ವಾತಾವರಣ ಪೂರಕವಾಗಿದೆ. ರೈತರು ವಾಣಿಜ್ಯ ಬೆಳೆಯನ್ನು ಬೆಳೆಯುವುದರೊಂದಿಗೆ ಸಿರಿಧಾನ್ಯಗಳನ್ನು ಸಹ ಬೆಳೆಯಲು ಆಸಕ್ತಿ ತೋರಬೇಕು. ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲು ಸರ್ಕಾರದಿಂದ ಸಹಾಯಧನ ಸೌಲಭ್ಯವನ್ನು ನೀಡಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಕಡಿಮೆ ವಿಸ್ತೀರ್ಣದ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಗಳನ್ನು ಬೆಳೆದು ಹೆಚ್ಚು ಹಣ ಗಳಿಸುವ ಆಸೆಯಿಂದ ರೈತರು ಆಧುನಿಕ ಬೆಳೆಗಳನ್ನು ಬೆಳೆಯುವತ್ತ ಮುಖ ಮಾಡಿದ್ದಾರೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಆಸೆ ಪಡುವುದು ತಪ್ಪಲ್ಲ. ಆದರೆ ಹಣದ ಜೊತೆಗೆ ಆರೋಗ್ಯದ ಕಡೆಯೂ ಗಮನ ನೀಡುವುದು ಬಹು ಮುಖ್ಯ ಎಂದರು.

ರೈತರು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ಉತ್ತೇಜಿಸುವ ಸಲುವಾಗಿ 2023ನ್ನುಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ’ವೆಂದು ಘೋಷಿಸಲಾಗಿದ್ದು, ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕೆಂದು ತಿಳಿಸಿದರಲ್ಲದೆ, ನಾವೆಲ್ಲರೂ ಬಿಳಿ ಬಣ್ಣದ ಅನ್ನಕ್ಕೆ ಮಾರು ಹೋಗಿದ್ದೇವೆ. ತಮ್ಮ ಬಾಲ್ಯದಲ್ಲಿ ಪ್ರತಿನಿತ್ಯ ಸಿರಿಧಾನ್ಯಗಳ ಅಡಿಗೆ ಊಟ ಮಾಡುತ್ತಿದ್ದೆವು. ಹಬ್ಬ-ಹರಿದಿನಗಳಂದು ಮಾತ್ರ ಬಿಳಿ ಅನ್ನ ತಿನ್ನಲು ಸಿಗುತ್ತಿತ್ತು. ಆದರೆ ಈಗ ಬದಲಾದ ಆಹಾರ ಪದ್ಧತಿಯಿಂದ ನಾವೆಲ್ಲಾ ಅಕ್ಕಿ, ಸಕ್ಕರೆ, ಮೈದಾದಂತಹ ಬಿಳಿ ಬಣ್ಣದ ಆಹಾರ ಪದ್ಧತಿಗೆ ಒಗ್ಗಿಕೊಂಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ನಿಯಮಿತವಾಗಿ ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಿರಿಧಾನ್ಯಗಳಿಂದಲೂ ಆರ್ಥಿಕವಾಗಿ ಸಬಲರಾಗಬಹುದು. ರೈತರು ಒಗ್ಗೂಡಿ ರೈತ ಉತ್ಪಾದಕರ ಸಂಘ ಸ್ಥಾಪಿಸುವ ಮೂಲಕ ಪರಸ್ಪರ ತಮ್ಮಲ್ಲಿರುವ ಕೃಷಿ ಕೌಶಲ್ಯವನ್ನು ವಿನಿಮಯ ಮಾಡಿಕೊಂಡು ಬೆಳೆದ ಸಿರಿಧಾನ್ಯಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಂಡು ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು

ದಬ್ಬೇಘಟ್ಟದ ಸ್ವರ್ಣಭೂಮಿ ರೈತ ಉತ್ಪಾದಕರ ಸಂಘವು ತೆಂಗಿನ ವಿವಿಧ ಉತ್ಪನ್ನಗಳಿಂದ 2021-22ನೇ ಸಾಲಿನಲ್ಲಿ 1 ಕೋಟಿ ರೂ.ಗಳ ವಹಿವಾಟು ನಡೆಸುವಷ್ಟು ಅಭಿವೃದ್ಧಿ ಹೊಂದಿರುವುದು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಅದೇ ರೀತಿ ಸಿರಿಧಾನ್ಯಗಳಿಂದ ತಯಾರಿಸಿದ ಜೀನಿ ಉತ್ಪನ್ನ ತಯಾರಿಸುತ್ತಿರುವ ಶಿರಾ ತಾಲ್ಲೂಕಿನ ದಿಲೀಪ್, ತಂತ್ರಜ್ಞಾನ ಬಳಸಿಕೊಂಡು ನೆಲ್ಲಿಕಾಯಿ ಉತ್ಪನ್ನಗಳಿಂದ ಕೊರಟಗೆರೆ ತಾಲ್ಲೂಕು ದುರ್ಗದ ನಾಗೇನಹಳ್ಳಿ ಮಹೇಶ್ ಅವರು ಆದಾಯ ಗಳಿಸುತ್ತಿದ್ದಾರೆ.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಮಾತನಾಡಿ, ಸಿರಿಧಾನ್ಯಗಳಲ್ಲಿರುವ ಪೌಷ್ಟಿಕಾಂಶಗಳ ಗುಣಧರ್ಮಗಳನ್ನರಿತು ಅಂತರಾಷ್ಟಿçÃಯ ಮಟ್ಟದಲ್ಲಿ ಮಹತ್ವ ನೀಡಲಾಗಿದೆ. ಆಧುನಿಕ ಕಾಲದಲ್ಲಿ ಬದಲಾದ ಆಹಾರ ಪದ್ಧತಿಯಿಂದ ಶೇ.90ರಷ್ಟು ಜನರು ವಿವಿಧ ಖಾಯಿಲೆಗಳಿಂದ ಬಳಲುವಂತಾಗಿದೆ. ಬಾಯಿರುಚಿಗೆ ಜûಂಕ್ ಫುಡ್ ತಿನ್ನುವುದನ್ನು ತ್ಯಜಿಸಿ ಪಾರಂಪರಿಕ ಆಹಾರ ಪದ್ಧತಿಯನ್ನನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದರಲ್ಲದೆ, ನವಣೆ, ಬರಗು, ಊದಲುನಂತಹ ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮವೆಂದು ವೈಜ್ಞಾನಿಕವಾಗಿ ಕಂಡುಕೊಳ್ಳಲಾಗಿದೆ. ರೈತರು ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆಯಂತಹ ಏಕ ಬೆಳೆಗೆ ಮಾತ್ರ ಆದ್ಯತೆ ನೀಡದೆ ಎಣ್ಣೆಕಾಳು ಬೆಳೆ, ಸಿರಿಧಾನ್ಯ ಬೆಳೆಗಳನ್ನು ಸಹ ಮಿಶ್ರ ಬೆಳೆಯಾಗಿ ಬೆಳೆಯಬೇಕೆಂದು ಕರೆ ನೀಡಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿ.ಪಾಪಣ್ಣ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯವರಿಗೆ ಆರೋಗ್ಯಮಯ ಆಹಾರ ದೊರೆಯಬೇಕು. ಈ ನಿಟ್ಟಿನಲ್ಲಿ ರೈತಮಿತ್ರರು ಆರೋಗ್ಯ ಪೂರಕವಾದ ಬೆಳೆಗಳನ್ನು ಬೆಳೆಯಬೇಕು. ರಾಸಾಯನಿಕ ಗೊಬ್ಬರ ಬಳಸುವುದರಿಂದ ಯಾವುದೇ ಪೋಷಕಾಂಶ ದೊರೆಯುವುದಿಲ್ಲ. ಸಾವಯವ ಗೊಬ್ಬರ ಬಳಕೆಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್.ರವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇಲಾಖೆಯಿಂದ ಸಿರಿಧಾನ್ಯ ಬೆಳೆಯಲು ಕೃಷಿ ಪ್ರದೇಶದ ವಿಸ್ತಿರ್ಣ ಹೆಚ್ಚಿಸಲು 6000 ರೂ.ಗಳ ಪ್ರೋತ್ಸಾಹಧನ, ಸಿರಿಧಾನ್ಯ ಬೆಳೆಗಳ ಸಂಸ್ಕರಣೆ ಮಾಡಲು ಸಹಾಯಧನ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಾಗಾರದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡ 1 ರಿಂದ 7ನೇ ತರಗತಿ ವಿಭಾಗದಲ್ಲಿ ಚೇತನ ವಿದ್ಯಾಮಂದಿರದ 5ನೇ ತರಗತಿಯ ದ್ಯಾನಿಕ ಕುಂಬ್ಳೆ, ವಿದ್ಯಾನಿಕೇತನ ಶಾಲೆಯ 6ನೇ ತರಗತಿ ಪ್ರಥಮ್ ಜಿ. ಶ್ರೀರಾಮ ಹಾಗೂ ಹರ್ಷಿಕ್ ಬೆಡಗ್ ಎಸ್. ಅವರಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಲಾಯಿತು.

ಅದೇ ರೀತಿ 8 ರಿಂದ 12ನೇ ತರಗತಿ ವಿಭಾಗದಲ್ಲಿ ಶಿರಾ ತಾಲ್ಲೂಕು ಗುಳಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ತೇಜಸ್ ಜಿ., ಬೆಂಗಳೂರಿನ ಕೆಂಪೇಗೌಡ ಪ್ಯಾರಾಮೆಡಿಕಲ್ ಕಾಲೇಜಿನ ಮಹೇಶ್ ನಾಯ್ಕ ಹಾಗೂ ಆರ್ಯನ್ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರಜ್ಞಾ ಕೆ. ಅವರು ಮೊದಲ, ದ್ವಿತೀಯ, ತೃತೀಯ ಬಹುಮಾನ ಪಡೆದುಕೊಂಡರು.

ರಂಗೋಲಿ ಸ್ಪರ್ಧೆಯಲ್ಲಿ ಎಸ್.ಜಿ. ನಿರ್ಮಲ ಪ್ರಥಮ, ಸಿ. ಸೌಮ್ಯ ದ್ವಿತೀಯ, ಧನಲಕ್ಷಿö್ಮ ಅವರು ತೃತೀಯ ಬಹುಮಾನವನ್ನು ಜಿಲ್ಲಾಧಿಕಾರಿಗಳಿಂದ ಪಡೆದರು.

ನಂತರ ಪಾವಗಡ ತಾಲ್ಲೂಕಿನ ಜಿ. ಅನಿಲ್ ಕುಮಾರ್, ಚಿಕ್ಕನಾಯಕನಹಳ್ಳಿಯ ಗೋವರ್ಧನ, ಗುಬ್ಬಿಯ ಎಲ್.ಆರ್. ಪ್ರಮೋದ್, ತಿಪಟೂರಿನ ಹೆಚ್.ವಿ.ಪುನೀತ, ತುರುವೇಕೆರೆಯ ಮುನಿಸ್ವಾಮಯ್ಯ, ಮಧುಗಿರಿಯ ವಿ.ರವಿ, ತುಮಕೂರಿನ ಹರೀಶ್, ಕುಣಿಗಲ್‌ನ ಶಿವಕುಮಾರಸ್ವಾಮಿ, ಕೊರಟಗೆರೆಯ ಎಸ್.ಜಿ. ಮುತ್ತನರಸಿಂಹಯ್ಯ, ಶಿರಾ ತಾಲ್ಲೂಕಿನ ಸಿ.ಯು. ಗುಂಡಯ್ಯ ಅವರಿಗೆ ಜಿಲ್ಲಾ ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋವಿಂದರಾಜು, ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಜಿ.ಕೆ. ಅನಸೂಯ ಕಳಸೇಗೌಡ, ನಬಾರ್ಡ್ ಬ್ಯಾಂಕಿನ ಎ.ಜಿ.ಎಂ. ಕೀರ್ತಿಪ್ರಭ, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ, ಕೃಷಿಕ ಸಮಾಜದ ವಿವಿಧ ತಾಲ್ಲೂಕಿನ ಪ್ರತಿನಿಧಿಗಳಾದ ಹನುಮಂತೇಗೌಡ, ಸಿದ್ಧರಾಮೇಶ್ವರ, ಚೆನ್ನಲಿಂಗಣ್ಣ, ರಂಗಸ್ವಾಮಿ, ನಾಗಣ್ಣ, ಜಿ.ಕೆ.ಕುಮಾರ್, ತ್ಯಾಗರಾಜ್, ರಾಜಶೇಖರ್, ಸೇರಿದಂತೆ ರೈತಬಾಂಧವರು, ರೈತ ಮಹಿಳೆಯರು ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Verified by MonsterInsights