ರಂಗೋಲಿ ಸ್ಪರ್ಧೆ : ಹೆಣ್ಣು ಭ್ರೂಣ, ಮಗು, ಮಕ್ಕಳು, ಮಹಿಳೆ ಬಗ್ಗೆ ಜಾಗೃತಿ ಮೂಡಿಸಿದವರೇ ಹೆಚ್ಚು

ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಮುಖ್ಯ ವೃತ್ತಗಳಲ್ಲಿ ಹಾಕಲಾಗಿದ್ದ ರಂಗೋಲಿ ಚಿತ್ತಾರಗಳು. ಹೌದು ಬೆಳಗಿನ ಜಾವದಿಂದಲೇ ಯುವತಿಯರು ಮತ್ತು ಹೆಂಗಳೆಯರು ಕೈಯಲ್ಲಿ ರಂಗೋಲಿ ಹಿಡಿದು ಮುಖ್ಯ ವೃತ್ತಗಳಲ್ಲಿ ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ರಂಗೋಲಿ ಬಿಟ್ಟಿದ್ದು, ವಿಶೇಷವಾಗಿತ್ತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಬಳ್ಳಾರಿ ಉತ್ಸವದ ಅಂಗವಾಗಿ ಜನವರಿ 20 ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಮೊದಲ ಸುತ್ತಿನ ರಂಗೋಲಿ ಸ್ಪರ್ಧೆಗೆ ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ರಾಜೇಶ್ವರಿ ಅವರು ರಂಗೋಲಿ ಹಾಕುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆ ವಿಭಜನೆಯಾದ ನಂತರ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಬಗ್ಗೆ ಎಲ್ಲರಲ್ಲೂ ಉತ್ಸಾಹ ಹೆಚ್ಚಾಗಿದೆ. ಅದರಲ್ಲೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿರುವ ರಂಗೋಲಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯ ಮತ್ತು ನಗರವಾಸಿಗಳು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಮಹಿಳೆಯರಲ್ಲಿ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಮತ್ತು ಯುವತಿಯರಿಗೆ ಶುಭ ಹಾರೈಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಕೀನಾ ಅವರು ಮಾತನಾಡಿ, ಬಳ್ಳಾರಿ ಉತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಎರಡು ಸುತ್ತಿನ ಸ್ಪರ್ಧೆ ಇದಾಗಿದ್ದು, ಸಾಂಪ್ರದಾಯಿಕ (ಚುಕ್ಕಿ) ಮತ್ತು ಕಲಾಕೃತಿ ಆಧಾರದ ಮೇಲೆ ಎರಡನೇಯ ಸುತ್ತಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಮೊದಲ ಸುತ್ತಿನಲ್ಲಿ ಒಟ್ಟು 160 ಮಹಿಳೆಯರು ಹಾಗೂ ಯುವತಿಯರು ಭಾಗವಹಿಸಿದ್ದಾರೆ. 50ರಿಂದ 60 ಜನರ ಸುಂದರವಾಗಿ ಮೂಡಿಬಂದ ರಂಗೋಲಿಯನ್ನು ನಾಳೆ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.


ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ ಪಡೆದವರಿಗೆ ರೂ.3000, ಎರಡನೇ ಬಹುಮಾನ ರೂ.2000 ಹಾಗೂ ತೃತೀಯ ಬಹುಮಾನವಾಗಿ ರೂ.1000 ಗಳನ್ನು ನಗದು ಬಹುಮಾನದ ಜೊತೆಗೆ 4 ಸಮಾಧನಕರ ಬಹುಮಾನದ ಜೊತೆಗೆ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಿಡಿಪಿಓ ಉಷಾ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಮಣ್ಣ, ಮೌನೇಶ್, ಡಬ್ಲ್ಯೂಸಿಡಿ ನಾಗವೇಣಿ, ವಾರ್ಡನ್ ಉಷಾ, ಅಂಬಿಕಾ ಸೇರಿದಂತೆ ಇತರರು ಇದ್ದರು

Verified by MonsterInsights