“ಅಹಿಂದ” ನಾಯಕನಿಗೆ ದಕ್ಕಿದ ಸಚಿವ ಸ್ಥಾನ

ತುಮಕೂರು: ಜಿಲ್ಲೆಯ ಫೈರ್ ಬ್ರ್ಯಾಂಡ್ ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟವನ್ನು ಸೇರಲಿರುವ ಕೆ.ಎನ್.ರಾಜಣ್ಣ ಅವರು ಇಂದು ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ.

ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿರುವ ಕೆ.ಎನ್.ರಾಜಣ್ಣ ಅವರು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಸದಸ್ಯರಾಗಿ, ಜೆಡಿಎಸ್ ನಿಂದ ಒಮ್ಮೆ ಶಾಸಕರಾಗಿ, ಕಾಂಗ್ರೆಸ್ ನಿಂದ ಎರಡನೇ ಬಾರಿ ಶಾಸಕರಾಗಿ 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಈ ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.

ಜಿಲ್ಲೆಯಲ್ಲಿ ಅಹಿಂದ ವರ್ಗಗಳ ಕಣ್ಮಣಿಯಾಗಿ, ಅಹಿಂದ ವರ್ಗಗಳ ಧ್ವನಿಯಾಗಿರುವ ಕೆ.ಎನ್.ರಾಜಣ್ಣ ಅವರು 2013ರಲ್ಲಿನ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ವಿಶೇಷ ಘಟಕ ಯೋಜನಾ ಸಮಿತಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಲು ಕಾರಣಕರ್ತರಾಗಿದ್ದಾರೆ.

ಜಿಲ್ಲೆಯಲ್ಲಿ ಸಣ್ಣ ಸಮುದಾಯಗಳಿಗೆ ಅಧಿಕಾರ ಕೊಡಿಸುವ ಮೂಲಕ ತಳ ಸಮುದಾಯಗಳಿಗೆ ಆಶಾಕಿರಣವಾಗಿರುವ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲೆಯ ತಳ ಸಮುದಾಯಗಳು ಪಕ್ಷಾತೀತವಾಗಿ ಕಾಂಗ್ರೆಸ್ ನ ಹೈಕಮಾಂಡ್ ಅನ್ನು  ಒತ್ತಾಯ ಮಾಡಿದ್ದವು, ದಕ್ಷಿಣ ಕರ್ನಾಟಕದಲ್ಲಿ ನಾಯಕ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸಚಿವ ಸ್ಥಾನ ನೀಡಿದೆ.

ಬಂಡಾಯದಿಂದ ಸಚಿವ ಸ್ಥಾನ

1994ರಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎನ್.ರಾಜಣ್ಣ ಅವರು, 24 ಸಾವಿರ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣರಾದರು, ನಂತರ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು.

ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವಶಾಲಿ ನಾಯಕನಾಗಿರುವ ಕೆ.ಎನ್.ರಾಜಣ್ಣ ಅವರು ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದು, ಫಲಿತಾಂಶವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದಾರೆ ಎನ್ನುವುದು ಹಲವು ಸಂದರ್ಭದಲ್ಲಿ ಸಾಬೀತುಪಡಿಸಿದ್ದಾರೆ.

ನೇರ ನುಡಿ ಮತ್ತು ಬಂಡಾಯ ಮನೋಭಾವದಿಂದಲೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಎನ್.ರ್ಹಕಾರಿ ವಲಯವನ್ನೇ ತಮ್ಮ ಸೇವೆಗೆ ಆಯ್ದುಕೊಂಡಿದ್ದು, ವಕೀಲರಾಗಿಯೂ ದೀನ, ದಲಿತರಿಗೆ ನ್ಯಾಯ ಒದಗಿಸುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ.

ನೇರ ನುಡಿಯಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಕೆ.ಎನ್.ರಾಜಣ್ಣ ಅವರು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಸೋಲಿಗೆ ನಾನೇ ಕಾರಣ ಎನ್ನುವ ಮೂಲಕ ರಾಜಕೀಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದರು.

ಸಾಲಮನ್ನಾ ನೀಡಿದ ಧೀಮಂತ ಸಹಕಾರಿ

ರೈತರ ಸಾಲಮನ್ನಾ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದಾಗಲೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಮೂಲಕ ಮರಣ ಹೊಂದಿದ್ದ ರೈತರ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವ ಜನಪರ, ರೈತ ಪರ ನಿರ್ಣಯವನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಅಸಂಖ್ಯಾತ ರೈತ ಕುಟುಂಬಗಳು ನೆಮ್ಮದಿಯಿಂದ ಜೀವಿಸುವಂತಹ ವಾತಾವರಣ ನಿರ್ಮಿಸಿದರು.

ಮೊದಲನೇ ಬಾರಿಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಮಧುಗಿರಿಗೆ ಬಂದಿದ್ದಾಗಲೇ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವ ಯೋಜನೆಯನ್ನು ಪ್ರಾರಂಭಿಸಬೇಕೆಂದು ಮನವಿ ಮಾಡಿ, ಅಲ್ಲಿಯೇ ಯೋಜನೆಯನ್ನು ಪ್ರಾರಂಭಿಸಲು ಒಪ್ಪಿಗೆ ಸೂಚಿಸಿದ ಸಿದ್ದರಾಮಯ್ಯ, ಯೋಜನೆ ಜಾರಿಗೆ ತರಲು ಒಪ್ಪಿದ್ದರು.
ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನಿರಂತರ ವಿದ್ಯುತ್ ಕಲ್ಪಿಸುವ ಬೆಳಕು ಯೋಜನೆಯನ್ನು ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಗೆ ತಂದರು.

ವಿಶ್ವವಿದ್ಯಾಲಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿಹೆಚ್ಚು ಅಂಕ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲು ಡಿಸಿಸಿ ಬ್ಯಾಂಕ್ ಠೇವಣಿ ಇಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ.

Verified by MonsterInsights