ಹಾಸ್ಟೆಲ್ ದಾಂಧಲೆ: ಎಫ್ಐಆರ್ ದಾಖಲು –ಪ್ರಜಾಕಹಳೆ ಇಂಪ್ಯಾಕ್ಟ್

ಡೆಸ್ಕ್
1 Min Read

ತುಮಕೂರು: ನಗರದ ಎಂಜಿ ರಸ್ತೆ ಹಾಸ್ಟೆಲ್ ಗೆ ರಾತ್ರಿ ಮೂರು ಗಂಟೆ ವೇಳೆಯಲ್ಲಿ ನುಗ್ಗಿ ದಾಂಧಲೆ ಎಬ್ಬಿಸಿದ ವ್ಯಕ್ತಿಗಳ ವಿರುದ್ಧ ಹಾಸ್ಟೆಲ್ ವಾಚ್ ಮೆನ್ ಕೆಂಪರಾಜು ನೀಡಿರುವ ದೂರಿನ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.23ರಂದು ರಾತ್ರಿ 3 ಗಂಟೆ ಸುಮಾರಿಗೆ ವೈ.ಎನ್.ಹೊಸಕೋಟೆಯ ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ನರಸಿಂಹಮೂರ್ತಿ ಅವರು ಬಂದು ಪ್ರಕರಣ ಸಂಬಂಧ ಆರೋಪಿ ಹಾಸ್ಟೆಲ್ ನಲ್ಲಿ ಇರುವ ಬಗ್ಗೆ ಮಾಹಿತಿ ಇದ್ದು ವಿಚಾರಣೆ ನಡೆಸಬೇಕು ಎಂದು ತಿಳಿಸಿದ್ದರಿಂದ ವಾರ್ಡನ್ ಗೆ ಮಾಹಿತಿ ನೀಡಿದ್ದು, ವಾರ್ಡನ್ ಬಂದ ನಂತರ ಪೊಲೀಸರು ವಿಚಾರಣೆ ಮಾಡಿ ಕಳುಹಿಸಿಕೊಟ್ಟರು ನಂತರ ದ್ವಿಚಕ್ರವಾಹನದಲ್ಲಿ ಮತ್ತೊಬ್ಬ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಬಂದು ತಾನು ಪೊಲೀಸ್ ಎಂದು ಹಾಸ್ಟೆಲ್ ಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸಿ ಬೆದರಿಕೆ ಹಾಕಿ ಗಲಾಟೆ ಮಾಡಿರುತ್ತಾರೆ ಎಂದು ದೂರಿನಲ್ಲಿ ಹಾಸ್ಟೆಲ್ ವಾಚ್ ಮೆನ್ ಕೆಂಪರಾಜು ತಿಳಿಸಿದ್ದಾರೆ.

ದೂರು ಸ್ವೀಕರಿಸಿರುವ ನಗರ ಠಾಣೆ ಪೊಲೀಸರು BNS U/s-329(2),204,351(2),352,3(5) ರ ಅಡಿಯಲ್ಲಿ ಅಕ್ರಮ ಪ್ರವೇಶ, ಶಾಂತಿಭಂಗ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಪ್ರಜಾಕಹಳೆ ಸೆ.25ರಂದು ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸಿದ್ದ ಬಗ್ಗೆ ವರದಿಯನ್ನು ಪ್ರಕಟಿಸಿತ್ತು.

ಪತ್ರಿಕೆಯ ವರದಿ ಸತ್ಯಕ್ಕೆ ದೂರವಾದದ್ದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಸಮಜಾಯಿಷಿ ನೀಡಿದ್ದರು. ಈಗ ಪತ್ರಿಕೆಯ ವರದಿಯೇ ಸತ್ಯವಾಗಿದ್ದು, ಕುಡಿದು ಹಾಸ್ಟೆಲ್ ನಲ್ಲಿ ದಾಂಧಲೆ ನಡೆಸಿರುವುದು ದೃಢಪಟ್ಟಿದ್ದು, ನಗರ ಠಾಣೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

 

Share this Article
Verified by MonsterInsights