ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ: ಅಂತಿಮ ಕ್ರಿಯೆ ನಡೆಸಿದ ಶಾಸಕ ಸುರೇಶ್ ಗೌಡ

ತುಮಕೂರು: ದಲಿತ ಮಹಿಳೆ ಶವಸಂಸ್ಕಾರಕ್ಕೆ ಅವಕಾಶ ನೀಡದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರೇ ಮುಂದೆ ನಿಂತು ಅಂತಿಮ ಕ್ರಿಯೆ ನಡೆಸಿರುವ ಘಟನೆ ಅರಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.

ಅರಕೆರೆ ಗ್ರಾಮ ಪಂಚಾಯತಿಯ ರಾಮಗೊಂಡನಹಳ್ಳಿ ಲಕ್ಷ್ಮಯ್ಯ ಅವರು 1980ರಿಂದಲೂ ಉಳುಮೆ ಮಾಡುತ್ತಿದ್ದು, ಶಾಸಕ ಸುರೇಶ್ ಗೌಡ ಅವರು ಎರಡನೇ ಅವಧಿಯಲ್ಲಿ ಶಾಸಕರಾಗಿದ್ದಾಗ ಲಕ್ಷ್ಮಯ್ಯ ಅವರಿಗೆ ಬಗರ್ ಹುಕುಂ ಸಮಿತಿ ಮೂಲಕ ಮಂಜೂರಾತಿ ನೀಡಿದ್ದರು.

ಭೂಮಿ ಮಂಜೂರಾಗಿದ್ದರು ಖಾತೆ ಆಗದ ಕಾರಣ ಅರಣ್ಯ ಇಲಾಖೆ ಇದು ಡೀಮ್ಡ್ ಅರಣ್ಯ ಪ್ರದೇಶವೆಂದು ಲಕ್ಷ್ಮಯ್ಯ ಅವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದ್ದರಿಂದ ಡಿ‌.ಸಿ.ಗೌರಿಶಂಕರ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಲಕ್ಷ್ಮಯ್ಯ ಅವರ ಮಗ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.

ಈಗ ಲಕ್ಷ್ಮಯ್ಯ ಅವರ ತಾಯಿ ವಯೋ ಸಹಜವಾಗಿ ಸಾವನ್ನಪ್ಪಿದ್ದು, ಉಳುಮೆ ಮಾಡುತ್ತಿದ್ದ ಜಮೀನಿನಲ್ಲಿ ಅಂತಿಮ ಕ್ರಿಯೆ ನಡೆಸಲು ಕುಟುಂಬಸ್ಥರು ತಯಾರಿ ನಡೆಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತಕರಾರು ತೆಗೆದು ಮಣ್ಣು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮಣ್ಣು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ಕೊಡದೇ ದೌರ್ಜನ್ಯ ತೋರಿದ್ದರಿಂದ ದಿಕ್ಕು ತೋಚದಂತಾದ ಲಕ್ಷ್ಮಯ್ಯ ಕುಟುಂಬಸ್ಥರು ಗ್ರಾಮಾಂತರ ಶಾಸಕ ಬಿ‌.ಸುರೇಶ್ ಗೌಡ ಅವರಿಗೆ ಅರಣ್ಯ ಇಲಾಖೆ ದೌರ್ಜನ್ಯದ ಮಾಹಿತಿ ನೀಡಿದ್ದಾರೆ.

ದಲಿತ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ವ್ಯಕ್ತಪಡಿಸಿದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಸುರೇಶ್ ಗೌಡ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆಸುಕೊಂಡಿದ್ದು, ಬಗರ್ ಹುಕುಂ ಸಮಿತಿ ಭೂಮಿ ಮಂಜೂರು ಮಾಡುವಾಗ ಇಲ್ಲದ ತಕರಾರು ಈಗ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಶಾಸಕ ಬಿ.ಸುರೇಶ್ ಗೌಡ ಅವರ ಮಧ್ಯ ಪ್ರವೇಶಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದ್ದು, ಶಾಸಕರೇ ಮುಂದೆ ನಿಂತು ಶವ ಸಂಸ್ಕಾರ ಮಾಡಿಸಿದ ನಂತರ ಅಲ್ಲಿಂದ ತೆರಳಿದ್ದಾರೆ.

ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ರವೀಶ್ ಅರಕೆರೆ, ಗ್ರಾಮ ಪಂಚಾಯತಿ ಸದಸ್ಯ ರಘು ಶಾಸಕರಿಗೆ ಜೊತೆಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಕೋರಾ ಪೊಲೀಸರು ಭೇಟಿ ನೀಡಿದ್ದರು.

Verified by MonsterInsights