ತುಮಕೂರು: ಮಂಗಳಮುಖಿಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ, ಆಕೆ ಪ್ರೀತಿಯನ್ನು ಒಪ್ಪದೇ ಇದ್ದರಿಂದ ಕೋಪಗೊಂಡು ಚಾಕುವಿನಿಂದ ಇರಿದಿರುವ ಘಟನೆ ಕುಣಿಗಲ್ ನಲ್ಲಿ ನಡೆದಿದೆ.
ಪಟ್ಟಣದ ಕೋಟೆ ಪ್ರದೇಶದ ಹನೀಷಾ ಮಂಗಳಮುಖಿಯಾಗಿದ್ದು, ಕಾರ್ಯಕ್ರಮಗಳಿಗಾಗಿ ಬೇರೆ ಊರುಗಳಿಗೆ ಹೋಗುತ್ತಿದ್ದಾಗ ಮಂಡ್ಯ ಮೂಲದ ಆದಿಲ್ ಪರಿಚಯವಾಗಿದ್ದು, ಕಳೆದ ಆರು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆದಿಲ್, ಹನೀಷಾ ಪರ ಊರುಗಳಿಗೆ ಹೋಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದು, ಮಾತಿನ ಚಕಮಕಿ ನಡುವೆ ಆದಿಲ್ ಚಾಕುವಿನಿಂದ ಆಕೆಗೆ ಇರಿದು ಪರಾರಿಯಾಗಲು ಯತ್ನಿಸಿದ್ದು, ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳು ಹನೀಷಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.