ಮೀಸಲಾತಿ ವಂಚಿತ ಸಮುದಾಯಕ್ಕೆ ಒಳಮೀಸಲಾತಿ
ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಸಂಬಂಧ ನೀಡಿರುವ ತೀರ್ಪು ನಿಜವಾಗಿಯೂ ಯಾರಿಗೆ ಅನ್ಯಾಯ ವಾಗುತ್ತಿತ್ತು, ಯಾರೆಲ್ಲಾ ತುಳಿತಕ್ಕೆ ಒಳಗಾಗಿದ್ರು ,ಸಮಾಜದಿಂದ ಬಹಿಷ್ಕೃತರು ಅಂತಾ ಜೀವನ ಮಾಡಿದ್ದವರು, ಊರಿಂದ ಆಚೆ ಇರಬೇಕು ಎನ್ನುವ ಸ್ಥಿತಿಯಲ್ಲಿ ಇದ್ದವರೆಲ್ಲರಿಗೂ ಮುಖ್ಯವಾಹಿನಿಗೆ ಬರುವ ಅವಕಾಶವನ್ನು ಕಲ್ಪಿಸಿದೆ. ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡಲು ಯಾವುದೇ ಅಡ್ಡಿಗಳಿಲ್ಲ, ಮೀಸಲಾತಿಯಿಂದ ವಂಚಿತವಾಗಿರುವ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತರಬಹುದಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪರಿಶಿಷ್ಟ ಜಾತಿಗೆ ಶೇ.17ರಷ್ಟು ಕಲ್ಪಿಸಿ ಎ.ಬಿ.ಸಿ.ಡಿ ವರ್ಗೀಕರಣ ಮಾಡುವ ಮೂಲಕ ಒಳ ಮೀಸಲಾತಿಗೆ ನಾಂದಿ ಹಾಕಿದೆ. ಈಗಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಶೇ.17ರಷ್ಟರಲ್ಲಿಯೇ ಒಳ ಮೀಸಲಾತಿ ತರುತ್ತದೆಯೋ ಅಥವಾ ಹಿಂದೆ ಇದ್ದ ಶೇ.15ರಲ್ಲಿಯೇ ಒಳ ಮೀಸಲಾತಿ ತರುತ್ತದೆಯೋ ಗೊತ್ತಿಲ್ಲ, ಆದರೆ ಒಳ ಮೀಸಲಾತಿ ಕಲ್ಪಿಸದೇ ಈಗಾಗಲೇ ಮೀಸಲಾತಿ ವಂಚಿತ ಸಮುದಾಯಗಳು ಸಾಕಷ್ಟು ಅನ್ಯಾಯಕ್ಕೆ ಒಳಗಾಗಿದ್ದು, ಕಾಲಹರಣವೂ ಆಗಿರುವುದರಿಂದ ಸಿದ್ದರಾಮಯ್ಯ ಒಳಮೀಸಲಾತಿ ಕೂಡಲೇ ಜಾರಿಗೆ ತರಬೇಕಿದೆ.
ಅಸ್ಪೃಷ್ಯರಿಗೆ ಸಹಾಯವಾಗಬೇಕಾದ ಮೀಸಲಾತಿಯನ್ನ ಕೆಲವೇ ಸ್ಪೃಷ್ಯ ಜಾತಿಗಳು ಮಾತ್ರ ಬಳಸಿಕೊಳ್ಳುತ್ತಿವೆ ಎಂದು ಪರಿಶಿಷ್ಟ ಜಾತಿಯ ಅಸ್ಪೃಷ್ಯ ಜಾತಿಗಳು ಹೋರಾಟ ಮಾಡಿ ಹೈಕೋರ್ಟ್ ಮೊರೆ ಹೋಗಿದ್ದರು. ರಾಜ್ಯದಲ್ಲಿ ಸುಮಾರು 102-103 ಪ.ಜಾ ಜನಾಂಗದವರಿದ್ದಾರೆ, 53-54 ಪ. ಪಂಗಡದವರಿದ್ದಾರೆ. ಪರಿಶಿಷ್ಟ ಜಾತಿಯವರು ಮಾತ್ರವೇ ಒಳಮೀಸಲಾತಿ ಹೋರಾಟ ಮಾಡುತ್ತಿದ್ದರು, ಪರಿಶಿಷ್ಟ ಪಂಗಡವರೇನೂ ಹೆಚ್ಚು ಒತ್ತು ಕೊಟ್ಟಿರಲಿಲ್ಲ, ಆಗ ಸರ್ಕಾರ ನ್ಯಾಯಾದೀಶ ಎ.ಜೆ.ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿ ವರದಿ ಕೇಳಿತ್ತು ಅದರಂತೆ ಆಯೋಗ ವರದಿ ನೀಡಿದ್ದರು.
ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯಲ್ಲಿ ಪರಿಶಿಷ್ಟ ಜಾತಿಯನ್ನು 4 ಗುಂಪುಗಳಾಗಿ ಮಾಡಿದರು. ಎಡಗೈ ಮಾದಿಗ ಸಮುದಾಯಕ್ಕೆ ಶೇ.6, ಬಲಗೈ ಹೊಲೆಯ ಸಮುದಾಯಕ್ಕೆ ಶೇ.5 ಕೊಟ್ಟರು, ಇನ್ನಿತರೆ ಲಂಬಾಣಿ, ಬೋವಿ ಸಮುದಾಯಗಳು ಪ.ಜಾತಿಯಲ್ಲೇ ಸೃಷ್ಯ ಜಾತಿಗಳು ಎಂದು ಶೇ.3 ನೀಡಿದ್ರು, ಶೇ.1 ರನ್ನ ಅಲೆಮಾರಿಗಳಿಗೆ ನೀಡಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪ. ಜಾ ಮತ್ತು ಪ ಪಂಗಡದ ಮೀಸಲಾತಿಯನ್ನ ಹೆಚ್ಚು ಮಾಡಬೇಕೆಂಬ ಒತ್ತಡ ಹೆಚ್ಚಿದಾಗ, ನ್ಯಾ.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯ ಆಯೋಗ ರಚನೆ ಮಾಡಲಾಗಿತ್ತು, ಆಯೋಗ ಮೀಸಲಾತಿಯನ್ನು ಹೆಚ್ಚಳ ಮಾಡಲು ಶಿಫಾರಸ್ಸು ಮಾಡಿತ್ತು. ಎಸ್ಸಿ ಸಮುದಾಯಗಳಿಗೆ ಶೇ.17 ಹಾಗೂ ಎಸ್ಟಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಯಿತು.
ಯಾರು ಮೀಸಲಾತಿಯನ್ನ ಬಳಸಿಕೊಂಡಿದ್ದಾರೆ,ಯಾರಿಗೆ ಶಕ್ತಿಯಿದೆ ಯಾರು ಮೀಸಲಾತಿಯನ್ನ ಬಳಸಿಕೊಂಡು ಮೇಲೆ ಬಂದಿದ್ದಾರೆ ಇನ್ಮುಂದೆ ಅವರನ್ನ ಮೀಸಲಾತಿಯಿಂದ ಹೊರಗಿಡಬೇಕು ಎಂಬ ಪ್ರಶ್ನೆ ಇದೆ. ಇದನ್ನ ಕೂಡ ಸರ್ಕಾರ ಗಮನಿಸಬೇಕು. ಅಶಕ್ತರಿಗೆ ಶಕ್ತಿ ತುಂಬಲಿಕ್ಕೆ ಮೀಸಲಾತಿಯನ್ನ ಒಂದು ಆಯುಧ ಮಾಡಿಕೊಂಡಿದ್ದೆವೆ, ಹಾಗಾಗಿ ಅಶಕ್ತರನ್ನ ಗುರ್ತಿಸಿ ಕೊಡಬೇಕು. ಅಶಕ್ತರು ಅಂದ್ರೆ ಯಾರು..? ಶೈಕ್ಷಣಿಕ,ರಾಜಕೀಯವಾಗಿ ಆರ್ಥಿಕವಾಗಿ ಸ್ಥಿತಿಯಲ್ಲಿದ್ದು ಹುಟ್ಟು ಒಂದೇ ಆಧಾರ ಮಾಡಿಕೊಂಡು ಪರಿಶಿಷ್ಟ ಜಾತಿ ಅಂತಾ ಮೀಸಲಾತಿ ತೆಗೆದುಕೊಳ್ಳುತ್ತಿದ್ದಾರೆ ಅಂತಹವರನ್ನ ಆದಷ್ಟು ದೂರ ಇಟ್ರೆ ನಿಜವಾದ ಪರಿಶಿಷ್ಟ ಜಾತಿಯವರಿಗೆ ಒಳ್ಳೆದಾಗುತ್ತದೆ.
ನ್ಯಾ.ನಾಗಮೋಹನ್ ದಾಸ್ ವರದಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿದ ಮೇಲೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಸಮಿತಿಯನ್ನು ಮಾಡಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿತು. ಸಮಿತಿ ಕೂಲಂಕಶವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿಯನ್ನು ನೀಡಿದ್ದು. ನ್ಯಾ.ಸದಾಶಿವ ಆಯೋಗದ ವರದಿಯಲ್ಲಿ ನೀಡಿದ್ದ ಮೀಸಲಾತಿ ಪ್ರಮಾಣವನ್ನು ಬದಲಿಸಿ ಮಾದಿಗ ಸಮುದಾಯಕ್ಕೆ ಶೇ.6, ಹೊಲೆಯ ಸಮುದಾಯಕ್ಕೆ ಶೇ.5.5, ಲಂಬಾಣಿ, ಬೋವಿ ಸ್ಪೃಶ್ಯ ಜಾತಿಗಳಿಗೆ ಶೇ.4.5 ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಮೀಸಲಾತಿ ನಿಗದಿ ಮಾಡಿ, ಎ.ಬಿ.ಸಿ.ಡಿ. ವರ್ಗೀಕರಣ ಮಾಡಲು ಶಿಫಾರಸ್ಸು ಮಾಡಲಾಯಿತು. ಸರ್ಕಾರ ಅದರಂತೆ ಘೋಷಣೆಯನ್ನು ಮಾಡಿತು.
ಬಿಜೆಪಿ ಸರ್ಕಾರ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ್ದರಿಂದ ಸುಪ್ರೀಂಕೋರ್ಟ್ ನ ಆದೇಶವನ್ನು ಮೀರಿ ಶೇ.50ಕ್ಕಿಂತ ಹೆಚ್ಚಿ ಮೀಸಲಾತಿ ನಿಗದಿಯಾಗಿತ್ತು ಅದರೊಂದಿಗೆ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ ಎನ್ನುವ ಸವಾಲುಗಳು ನಮ್ಮಮುಂದೆ ಇದ್ದರು ಸಹ ಸರ್ಕಾರ ಒಳ ಮೀಸಲಾತಿ ಕಲ್ಪಿಸಲು ಆದ್ಯತೆ ನೀಡಿತು. ಮೀಸಲಾತಿ ಪ್ರಮಾಣ ಶೇ.50 ದಾಟಿ ಹೋಗುವುದನ್ನ ಆಮೇಲೆ ನಿಭಾಯಿಸಿಕೊಳ್ಳುತ್ತೇವೆ ಎಂದು ಹೇಳಿ, ಈ ಶೇ 24 ಮೀಸಲಾತಿಯನ್ನ ವಿಂಗಡಿಸಿ ಕೊಟ್ಟೆವು. ಅದು ಅನುಷ್ಠಾನ ಮಾಡಲು ಸರ್ಕಾರದಿಂದ ಆದೇಶವನ್ನ ಮಾಡಲಾಯಿತು.
ಒಳ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ನಂತರ ರಾಜ್ಯ ಸರ್ಕಾರದ ಮುಂದೆ ಎರಡು ವಿಚಾರ ಇದೆ. ಈ ಹಿಂದೆ ಇದ್ದ ಶೇ.18%, 15+3 ಕೊಟ್ಟುಕೊಂಡು ಹೋಗುವುದಾದ್ರೆ ಯಾವುದೇ ತಾಪತ್ರಯ ಕಾಂಗ್ರೇಸ್ ಸರ್ಕಾರಕ್ಕೆ ಇಲ್ಲ, ಅದು ನಮ್ಮಲ್ಲಿ ಚಾಲ್ತಿಯಲ್ಲಿದ್ದ 50% ಮೀಸಲಾತಿಯೊಳಗೆ ಬರಲಿದೆ. ಒಳಮೀಸಲಾತಿ ನಿಯಮ ಒಪ್ಪಿಕೊಬೇಕಾದ್ರೆ ಇದನ್ನ ತಕ್ಷಣ ಅನುಷ್ಠಾನ ಮಾಡಬೇಕಾದ್ರೆ ಯಾವ ಅಡಚಣೆ ಕಾನೂನಿನಲ್ಲಿ ಇದೆ ಎಂದು ನಾನು ಭಾವಿಸಿಲ್ಲ.
ಒಳ ಮೀಸಲಾತಿ ಜಾರಿಗೆ ನಾನು ಅನೇಕ ಸಭೆಗಳನ್ನ ಮಾಡಿ ಮನವೊಲಿಸಲು ಪ್ರಯತ್ನ ಮಾಡಿದೆ, ಕಡ್ಡಾಯವಾಗಿ ಜನಸಂಖ್ಯೆ ಗೆ ಅನುಗುಣವಾಗಿ ಕೊಡಬೇಕು ಅಂದಾಗ ನಮಗೆ ಬೇರೆ ಮಾರ್ಗ ಇರಲಿಲ್ಲ. ಜನಸಂಖ್ಯೆ ಗಳನ್ನ ಸರಿಯಾಗಿ ಗುರ್ತಿಸಿ ನಾವು ಕೊಡಬೇಕಾಗಿತ್ತು, ನಾನು ಅಧ್ಯಕ್ಷ ನಾಗಿದ್ದಾಗ ಎಲ್ಲಾ ಸ್ಪಷ್ಟವಾದ ಟ್ಯಾಬ್ಲೋ ಫಾರಂ ಮಾಡಿ ಯಾವ ಯಾವ ಜನಸಂಖ್ಯೆ ಎಷ್ಟು ಬರುತ್ತದೆ ಯಾರ್ಯಾರನ್ನ ಯಾವ್ಯಾವ ಗ್ರೂಪ್ನಲ್ಲಿಡಹುದು ಬರಿ ಎಡಗೈ ಬಲಗೈ ಅಲ್ಲಾ…ಅವರ ಜೊತೆಗೆ ಇನ್ನು 15, 20, 30 ಸಣ್ಣ ಪುಟ್ಟ ಜಾತಿಗಳನ್ನ ಗ್ರೂಪ್ ಮಾಡಿ ಕೊಟ್ಟಿದ್ದೀವಿ.
ಸಿದ್ದರಾಮಯ್ಯನವರ ಸರ್ಕಾರ ಶೇ.15% ಗೆ ನಿಲ್ತಾರೋ ಶೇ.17% ಹೋಗ್ತಾರೋ ಪರಿಶಿಷ್ಟಜಾತಿಗೆ ಅದು ಅವರಿಗೆ ಬಿಟ್ಟದ್ದು. ನಾವು ಶೇ.17% ಹೋಗಿ ಬಿಟ್ಟಿದ್ದೇವೆ, ಶೇ.17% ಹೋದ್ರೆ ಏನ್ ಮಾಡಬೇಕು ಎಂದು ನಾನು ಪರಿಹಾರ ಕೊಟ್ಟಿದ್ದೇನೆ, ಶೇ.17% ಗೆ ಹೋಗದೆ ಇದ್ರೆ ಏನ್ ಮಾಡಬೇಕು ಅನ್ನೊದಕ್ಕೆ ಸದಾಶಿವ ಆಯೋಗದ ವರದಿ ಇದೆ. ಯಾವುದಾದ್ರೂ ಅನುಷ್ಠಾನ ಮಾಡಲಿ ತಕ್ಷಣ ಒಳಮೀಸಲಾತಿಯನ್ನ ಜಾರಿಗೆ ತರೊದು ಸೂಕ್ತ.
ಸುಪ್ರೀಂ ಕೋರ್ಟ್ ನ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನನಗೆ ಸಂತೋಷವಾಯಿತು ನಾನು ನನ್ನ ವರದಿಯಲ್ಲಿ ಬರೆದಿದ್ದೆ ಕೆನೆಪದರನ್ನ ಪರಿಶೀಲಿಸಿ ಇದರಲ್ಲೂ ಉಳ್ಳವರು ಉಳ್ಳದೆ ಇರೋರನ್ನ ಪರಿಶೀಲಿಸಬೇಕಾಗುತ್ತದೆ. ಇದನ್ನ ಬಳಸಿಕೊಂಡು ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನ ತಗೊಂಡು ಅಂತವರನ್ನ ಮೀಸಲಾತಿಯಿಂದ ತೆಗೆಯಬೇಕಾಗುತ್ತದೆ. ಮೀಸಲಾತಿ ಬಳಸಿಕೊಂಡು ಮೇಲೆ ಬಂದಮೇಲೆ ಮತ್ತೆ ಮತ್ತೆ ಅದೇ ಕುಟುಂಬದವರು ಅದನ್ನ ತೆಗೆದುಕೊಳ್ಳುವುದು ಗೌರವವಲ್ಲ ಎಂದು ನಾವು ಹೇಳಿದ್ವಿ. ಅದನ್ನೆ ಸುಪ್ರೀಂ ಕೋರ್ಟ್ ಒತ್ತಿ ಹೇಳಿರೊದ್ರಿಂದ ಅದನ್ನ ಕೂಡ ಇವತ್ತು ಇವರು ಆದೇಶದಲ್ಲಿ ಸೇರಿಸಿ ಸರ್ಕಾರಿ ಆದೇಶ ಹೊರಡಿಸಿ. ಇವರೇನೂ ಮಾಡಬೇಕಾಗಿಲ್ಲ, ರಿಮೂವ್ ಮಾಡಬೇಕು. ಅವರಿಗೆ ನಿಜವಾಗಿ ಕಾಳಜಿ ಇದ್ದರೆ 17% ಗೆ ಮಾಡಬೇಕು, ಇಲ್ಲಾ ಅಂದ್ರೆ ಕನಿಷ್ಠ 15% ಆದ್ರೂ ಮಾಡಿ ತಕ್ಷಣಕ್ಕೆ ಅವರಿಗೆ ಯಾರು ಯಾರಿಗೆ ಸ್ವಾಭಾವಿಕವಾಗಿ ಅವರ ಪಾಲಿದೆ ಅದನ್ನ ಹಂಚುವ ಕೆಲಸ ಸರ್ಕಾರ ಮಾಡಬೇಕು ಅನ್ನೊದು ನನ್ನ ವಾದ.