ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯದಲ್ಲಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿ ಈಗ ಕೇಂದ್ರ ಸಚಿವರಾಗಿದ್ದಾರೆ, ಮುಂದೆ ಮುಖ್ಯಮಂತ್ರಿ ಆಗ್ತಾರೆ ಎಂದು ಶಾಸಕ ಬಿ.ಸುರೇಶ್ ಗೌಡ ಅಚ್ಚರಿಯ ಹೇಳಿಕೆ ನೀಡಿದರು.
ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆ ಇತಿಹಾಸದಲ್ಲಿ ಯಾರೊಬ್ಬರೂ ಕೇಂದ್ರ ಸಚಿವರಾಗುವ ಅವಕಾಶ ಸಿಕ್ಕಿರಲಿಲ್ಲ, ಸೋಮಣ್ಣ ಅವರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದ್ದು, ಮುಂದೆ ಮುಖ್ಯಮಂತ್ರಿಗಳಾಗುವ ಯೋಗ ಇದೆ ಎಂದರು.
ರಾಜ್ಯದಲ್ಲಿ ದರಿದ್ರ ಕಾಂಗ್ರೆಸ್ ಸರ್ಕಾರ ಶಾಸಕರಿಗೆ ಒಂದು ರೂಪಾಯಿ ಅನುದಾನ ನೀಡಿಲ್ಲ, ನಾವೆಲ್ಲ ಪೇಪರ್ ಶಾಸಕರಾಗಿದ್ದೇವೆ, ಇಬ್ಬರು ಸಚಿವರಿದ್ದರು ಜಿಲ್ಲೆಗೆ ಒಂದು ಪೈಸೆ ಅನುದಾನ ತಂದಿಲ್ಲ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಬೊಕ್ಕಸ ಬರಿದಾಗಿದೆ, ಶಾಸಕರಾಗಿ ಒಂದು ವರ್ಷವಾದರೂ ಅನುದಾನ ನೀಡಲು ಆಗಿಲ್ಲ ಎಂದರು.
ತುಮಕೂರು ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಕಾಡುಗೊಲ್ಲ ಸಮುದಾಯ ಕಾರಣ, ಅಧಿವೇಶನದಲ್ಲಿ ಕಾಡುಗೊಲ್ಲರಿಗೆ ಎಸ್ಡಿ ಮೀಸಲಾತಿ ಧ್ವನಿಯಾಗಬೇಕಿದೆ, ಜಿಲ್ಲೆಯ ನೀರಾವರಿ ಯೋಜನೆಗಳಾದ ಎತ್ತಿನಹೊಳೆ ಪೂರ್ಣಗೊಳಿಸಬೇಕು, ಲಿಂಕ್ ಕೆನಾಲ್ ಯೋಜನೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,500 ಕೋಟಿ ಅನುದಾನ ನೀಡಿದೆ, ಆ ಅನುದಾನವನ್ನು ತಂದು ಜಿಲ್ಲೆಗೆ ನೀರಾವರಿ ಒದಗಿಸಬೇಕು, ಪಾವಗಡದವರೆಗೆ ಬಂದಿರುವ ರಾಯದುರ್ಗ ರೈಲ್ವೆ ಯೋಜನೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಒತ್ತು ನೀಡಬೇಕು. ಹೆಚ್.ಡಿ.ಕುಮಾರಸ್ವಾಮಿ ಕೈಗಾರಿಕಾ ಸಚಿವರಾಗಿದ್ದಾರೆ, ಅವರ ಸಹಕಾರದಿಂದ ಕೈಗಾರಿಕಾ ಕಾರಿಡಾರ್ ಪೂರ್ಣಗೊಳಿಸಿದರೆ, ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಮಸಾಲಜಯರಾಂ, ದಿಲೀಪ್ ಕುಮಾರ್, ಬೆಟ್ಟಸ್ವಾಮಿ, ತಿಪ್ಪೇಸ್ವಾಮಿ, ಬಿ.ಎಚ್.ಅನಿಲ್ ಕುಮಾರ್, ಎಲ್.ಸಿ.ನಾಗರಾಜು ಸೇರಿದಂತೆ ಇತರರಿದ್ದರು.