ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆಯಲ್ಲಿಯೇ ದಲಿತ ಪೇದೆ ಮೇಲೆ ಪಿಎಸ್‌ಐ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊರಟಗೆರೆ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಗೌಡ, ಹೆಡ್‌ಕಾನ್‌ಸ್ಟೇಬಲ್ ರಂಗನಾಥ್ ಎಂಬುವರ ಮೇಲೆ ಹಲ್ಲೆ ಮಾಡಿದ್ದು, ಪೇದೆ ರಂಗನಾಥ್ ಕೊರಟಗೆರೆ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಲಿಖಿತವಾಗಿ ದೂರು ನೀಡಿದ್ದು, ಎರಡು ದಿನಗಳಿಂದ ಕರ್ತವ್ಯಕ್ಕೆ ಗೈರಾಗಿದ್ದಾರೆ.
ಘಟನೆ ಏನು: ಮಧುಗಿರಿಯಿಂದ ವರ್ಗಾವಣೆಯಾಗಿ ಕೊರಟಗೆರೆಗೆ ಬಂದಿದ್ದ ಹೆಡ್‌ಕಾನ್‌ಸ್ಟೇಬಲ್ ರಂಗನಾಥ್ ಅವರಿಗೆ 112 ಡ್ಯೂಟಿ ನೀಡಲಾಗಿದ್ದು, ಎರಡು ದಿನಗಳ ಹಿಂದೆ 8ರಿಂದ8 ಗಂಟೆಯವರೆಗೆ 112 ಡ್ಯೂಟಿಯನ್ನು ಮಾಡಿ, ಠಾಣೆ ಬಂದ ರಂಗನಾಥ್ ಅವರಿಗೆ ಡ್ಯೂಟಿ ಮುಂದುವರೆಸಲು ಪಿಎಸ್‌ಐ ಚೇತನ್‌ಗೌಡ ಸೂಚಿಸಿದ್ದಾರೆ.
ಈಗಾಗಲೇ 12 ಗಂಟೆ ನಿರಂತರವಾಗಿ ಕೆಲಸ ಮಾಡಿದ್ದು, ಈಗ ಮುಂದುವರೆಸುವುದು ಹೇಗೆ? ಠಾಣೆಯಲ್ಲಿ ಇರುವ ಬೇರೆಯವರಿಗೂ ಡ್ಯೂಟಿ ನೀಡಿ ಎಂದು ರಂಗನಾಥ್ ಪಿಎಸ್‌ಐ ಚೇತನ್‌ಗೌಡಗೆ ಮನವಿ ಮಾಡಿದರೂ ಸಹ ಚೇತನ್‌ಗೌಡ ಅವರು ರಂಗನಾಥ್ ಅವರನ್ನೇ ಡ್ಯೂಟಿ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೇತನ್‌ಗೌಡ ಅವರ ಒತ್ತಾಯವನ್ನು ತಿರಸ್ಕರಿಸಿದ ಮುಖ್ಯಪೇದೆ ರಂಗನಾಥ್ ಅವರು ಠಾಣೆಯಲ್ಲಿ ಬೇರೆಯವರು ಇದ್ದಾಗಲೂ ನನ್ನನ್ನೇ ಕರ್ತವ್ಯ ಮುಂದುವರೆಸಲು ಹೇಳುತ್ತಿರುವುದು ಏಕೆ? ಎಲ್ಲ ಸಿಬ್ಬಂದಿಗಳನ್ನು ಒಂದೇ ರೀತಿ ಕಾಣುವಂತೆ ಎದುರುತ್ತರ ನೀಡಿದ್ದರಿಂದ ಆಕ್ರೋಶ ಗೊಂಡ ಪಿಎಸ್‌ಐ ಚೇತನ್‌ಗೌಡ ಅವರು ಮುಖ್ಯಪೇದೆ ರಂಗನಾಥ್ ಅವರ ಜಾತಿ ಬಗ್ಗೆ ಮಾತನಾಡಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಲ್ ಇನ್‌ಸ್ಪೆಕ್ಟರ್‌ಗೆ ದೂರು: ಘಟನೆಯ ಬಗ್ಗೆ ಮುಖ್ಯಪೇದೆ ರಂಗನಾಥ್ ಅವರು ಸರ್ಕಲ್ ಇನ್‌ಸ್ಪೆಕ್ಟರ್‌ಗೆ ದೂರು ಸಲ್ಲಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಸರ್ಕಲ್ ಇನ್‌ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಗೃಹಸಚಿವರ ಕ್ಷೇತ್ರದಲ್ಲಿಯೇ ದಲಿತ ಪೇದೆಯ ಮೇಲೆ ಪಿಎಸ್‌ಐ ಹಲ್ಲೆ ನಡೆಸಿರುವ ಘಟನೆ ಚರ್ಚೆಗೆ ಕಾರಣವಾಗಿದೆ.