ರಾತ್ರೋರಾತ್ರಿ ಅಕ್ರಮ ಮಣ್ಣು ಸಾಗಾಟ ಶುರು

ಗೃಹ ಸಚಿವರ ಕ್ಷೇತ್ರದಲ್ಲೇ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮಣ್ಣಿನ ದಂಧೆ..!

ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರು ಕ್ಷೇತ್ರದಲ್ಲೇ ಎಗ್ಗಿಲ್ಲದೆ ಅಕ್ರಮ ಮಣ್ಣಿನ ದಂಧೆ ನಡೆಯುತ್ತಿದ್ದು, ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಕಣ್ಣಳತೆಯಲ್ಲಿಯೇ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ತುಮಕೂರು ತಾಲ್ಲೂಕು ಚಿಕ್ಕತೊಟ್ಲುಕೆರೆಯಲ್ಲಿ ಅಕ್ರಮ ಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ,ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಕಂದಾಯ ಇಲಾಖೆ,ಅರಣ್ಯಿಇಲಾಖೆ ಹಾಗೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿವೆ.

ಪ್ರಭಾವಕ್ಕೆ ಮಣಿದರೆ ಅಧಿಕಾರಿಗಳು

ತುಮಕೂರಿನ ಪ್ರಭಾವಿ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ತುಮಕೂರಿನಲ್ಲಿ ನಡೆಸುತ್ತಿರುವ ರಸ್ತೆ ಕಾಮಗಾರಿಗೆ ಈ ಮಣ್ಣು ಸಾಗಿಸಲಾಗುತ್ತಿದೆ ಎಂಬ ಆರೋಪಗಳೂ ಸಹ ಕೇಳಿ ಬರುತ್ತಿವೆ.
ಸರ್ಕಾರದ ಆಸ್ತಿ ಕಾಪಾಡಬೇಕಾದ ಸರ್ಕಾರಿ ಅಧಿಕಾರಿಗಳು ಸರ್ಕಾರದ ಜಮೀನು ಖಾಸಗಿಯವರು ಕೊಳ್ಳೆ ಹೊಡೆಯುತ್ತಿದ್ದರೂ ಸಹ ಮೌನಕ್ಕೆ ಶರಣಾಗಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಕೋರಾ ಠಾಣೆಯ ಪೇದೆಯೊಬ್ಬರು ಸಾರ್ವಜನಿಕರಿಗೆ ಫೋನ್ ಮಾಡಿ ಮಾಹಿತಿ ಪಡೆದು ಸ್ಥಳಕ್ಕೆ ಹೋಗುವುದಾಗಿ ಸಮಾಧಾನ ಮಾಡುವ ಕೆಲಸವನ್ನು ನಾಜೂಕಾಗಿ ಮಾಡುತ್ತಿದ್ದಾರೆ.

“ತಹಶೀಲ್ದಾರ್ ಸಿದ್ದೇಶ್ ಅವರು ಸ್ಥಳ ಪರಿಶೀಲನೆಗೆ ತೋರಿಸುವ ಆಸಕ್ತಿಯನ್ನು ಸರ್ಕಾರಿ ಭೂಮಿ ಮತ್ತು ಮಣ್ಣನ್ನು ರಕ್ಷಿಸಲು ತೋರಿದರೆ ಸಾರ್ವಜನಿಕ ಕೆಲಸ ಇನ್ನಷ್ಟು ಸುಗಮವಾಗಿ ನಡೆಯಲಿದೆ”

ಬೆಳಿಗ್ಗೆ ಮಾಧ್ಯಮದ ಪ್ರತಿನಿಧಿಗಳೇ ಅಕ್ರಮ ಮಣ್ಣು ದಂಧೆಯ ಬಗ್ಗೆ ತಹಶೀಲ್ದಾರ್ ಸಿದ್ದೇಶ್ ಅವರಿಗೆ ಮಾಹಿತಿ ನೀಡಿದರೂ, ನನಗೂ ಅದಕ್ಕೂ ಸಂಬಂಧ ಇಲ್ಲ ಎಂಬಂತೆ ಮುಗುಮ್ಮಾಗಿ ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮಧ್ಯಾಹ್ನ ನಿಂತಿದ್ದು ರಾತ್ರಿ ಶುರುವಾಯಿತು

ಮಾಧ್ಯಮಗಳಲ್ಲಿ ಅಕ್ರಮ ಮಣ್ಣು ದಂಧೆಯ ಬಗ್ಗೆ ವರದಿ ಬಂದ ಬೆನ್ನಲ್ಲೇ ಸ್ಥಳದಿಂದ ಕಾಲ್ಕಿತ್ತಿದ್ದ ಲಾರಿಗಳು ಹಾಗೂ ಜೆಸಿಬಿಗಳು ರಾತ್ರಿಯಾಗುತ್ತಿದ್ದಂತೆ ಮತ್ತೆ ಕಾರ್ಯಾಚರಣೆ ಮಾಡುತ್ತಿದ್ದು, ರಾತ್ರೋರಾತ್ರಿ ಬೆಟ್ಟದ ಮಣ್ಣನ್ನು ಖಾಲಿ ಮಾಡುವ ಹುಮ್ಮಸ್ಸು ತೋರಿಸುತ್ತಿದ್ದರು ಸಹ ಕಂದಾಯ, ಗಣಿ ಮತ್ತು ಪೊಲೀಸರು ಕಣ್ಣಿದ್ದು ಕಾಣದಂತೆ ವರ್ತಿಸುತ್ತಿರುವುದರ ಹಿಂದೆ ಕುರುಡು ಕಾಂಚಾಣದ ಸದ್ದು ಕೇಳಿಬರುತ್ತಿದೆ.

ರಾಷ್ಟ್ರೀಯ ಪಕ್ಷವೊಂದರ ಪ್ರಭಾವಿ ರಾಜಕಾರಣಿ ನಿರ್ವಹಿಸುತ್ತಿರುವ ರಸ್ತೆ ಕಾಮಗಾರಿಗೆ ಬಳಸಲು ಮಣ್ಣನ್ನು ಸಾಗಿಸಲಾಗುತ್ತಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Verified by MonsterInsights