ತುಮಕೂರು: ಸಾಮ್ರಾಟ್ ಅಶೋಕನ ಕಾಲದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಶ್ರೀಲಂಕಾದಿಂದ ಬಂದ ಮಹಿಷಾ ಈ ನೆಲದ ಮೂಲ ರಾಜ, ಮಹಿಷಾಶೂರನನ್ನು ಮನುವಾದಿಗಳು ರಾಕ್ಷಸ ಎಂಬುವಂತೆ ಬಿಂಬಿಸುತ್ತಿದ್ದಾರೆ ಎಂದು ಉಪನ್ಯಾಸಕ ಜೆ.ಸಿ.ರಂಗಧಾಮಯ್ಯ ತಿಳಿಸಿದರು.
ನಗರದ ಅಂಬೇಡ್ಕರ್ ರಸ್ತೆಯಲ್ಲಿ ನಡೆದ ಮಹಿಷಾ ದಸರಾವನ್ನು ಉದ್ಘಾಟಿಸಿ ಮಾತನಾಡಿದ ಅವರು,ಮೂಲ ದ್ರಾವಿಡ ರಾಜನಾಗಿ ಸಮರ್ಥ ಆಡಳಿತವನ್ನು ಮಹಿಷಾನನ್ನು ಅಸುರ ಎನ್ನುವ ಮೂಲಕ ದ್ರಾವಿಡ ಪರಂಪರೆಯನ್ನು ಅಲ್ಲಗಳೆಯುವ ಕೆಲಸವನ್ನು ಪುರೋಹಿತಶಾಹಿಗಳು ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದರು.
ಮಹಿಷಾ ಮಹಾನ್ ಬೌದ್ಧ ಪ್ರಚಾರಕ ಎಂಬುದನ್ನು ಮನಗಂಡಿದ್ದ ಇತಿಹಾಸ ತಜ್ಞ ಮಂಟೇಲಿಂಗಸ್ವಾಮಿ ಎಂಬುವರು ಐವತ್ತು ವರ್ಷಗಳ ಹಿಂದೆಯೇ ಮಹಿಷಾ ದಸರಾಕ್ಕೆ ಚಾಮುಂಡಿಬೆಟ್ಟದಲ್ಲಿಯೇ ಚಾಲನೆಯನ್ನು ನೀಡುವ ಮೂಲಕ ದ್ರಾವಿಡ ಪರಂಪರೆಯನ್ನು ಉಳಿಸುವ ಕಾರ್ಯಕೈಗೊಂಡಿದ್ದರ ಫಲವಾಗಿ ಇಂದು ಮಹಿಷಾ ದಸರಾ ಹೆಚ್ಚು ಮನ್ನಣೆಯನ್ನು ಪಡೆಯುತ್ತಿದೆ ಎಂದರು.
ಸಾಮಾಜಿಕ ಹೋರಾಟಗಾರ ಕುಣಿಹಳ್ಳಿ ಮಂಜುನಾಥ್ ಮಾತನಾಡಿ ಮೈಸೂರಿನಲ್ಲಿ ನಡೆದಿರುವ ಐತಿಹಾಸಿಕ ಮಹಿಷಾ ದಸರಾ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತಾರವಾಗಲಿದ್ದು, ಮುಚ್ಚಿಟ್ಟಿರುವ ಸತ್ಯಗಳು ಹೊರಬರಲಿವೆ ಎನ್ನುವ ಆತಂಕ ಕೆಲ ಸ್ವಾಮೀಜಿಗಳಲ್ಲಿ ಇದೆ, ರಾಜನನ್ನು ರಾಕ್ಷಸನಾಗಿ ಮಾಡಿರುವುದಕ್ಕೆ ವಿರುದ್ಧವಾಗಿ ನಾಡಿನಲ್ಲಿ ಮಹಿಷಾ ದಸರಾ ಅದ್ಧೂರಿಯಾಗಿ ಮಾಡಲು ಮೂಲ ನಿವಾಸಿಗಳು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯಲದಬಾಗಿ ರಾಜಣ್ಣ, ಟಿ.ಸಿ.ರಾಮಯ್ಯ, ಪಿ.ಎನ್.ರಾಮಯ್ಯ, ವಾಸುದೇವ್, ನಾಗರಾಜ.ಜೆ.ಸಿ, ಆನಂದ್, ಭಾನುಪ್ರಕಾಶ್, ಬಂಡೆ ಕುಮಾರ್, ರಾಜಣ್ಣ, ಸೇರಿದಂತೆ ಇತರರಿದ್ದರು.