ತುಟಿ ಬಿಚ್ಚದ ರಾಜ್ಯ ಸಂಸದರು: ರೈತ ಸಂಘದ ಪ್ರತಿಭಟನೆ

ತುಮಕೂರು: ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾದರೂ ತುಟಿ ಬಿಚ್ಚದ ಸಂಸದ ಕ್ರಮವನ್ನು ಖಂಡಿಸಿ, ಒಕ್ಕೂಟ ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಟೌನ್‌ಹಾಲ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ಸಮಾವೇಶಗೊಂಡ ರೈತ ಸಂಘದ ನೂರಾರು ರೈತರು,ಕೇಂದ್ರ ಮತ್ತು ರಾಜ್ಯ ಸರಕಾರದ ರೈತವಿರೋಧಿ, ಜನವಿರೋಧಿ ನೀತಿಯನ್ನು ಖಂಡಿಸಿ, ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ಕೆಲ ಕಾಲ ಡಿ.ಸಿ.ಕಚೇರಿ ಎದುರು ಧರಣಿ ನಡೆಸಿ, ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ರೈತ ಸಂಘಟನೆಯ ಹೋರಾಟಗಾರರನ್ನು ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಂಕಷ್ಟ ಸಮಯದಲ್ಲಿ ಯಾವ ರೀತಿ ನೀರು ಬಳಕೆ ಮಾಡಬೇಕೆಂಬ ಸಂಕಷ್ಟ ಸೂತ್ರವನ್ನು ಸಿದ್ದಪಡಿಸದೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕೆಂದು ಆದೇಶ ನೀಡಿದ್ದು,ಇದನ್ನು ಸುಪ್ರೀಂಕೋರ್ಟು ಸಹ ಎತ್ತಿ ಹಿಡಿದಿರುವುದು ಅವೈಜ್ಞಾನಿಕವಾಗಿದೆ ಎಂದರು.

ಸರಕಾರ ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ಸಮರ್ಪಕ ವಾದ ಮಂಡಿಸಿ, ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು.ಹಾಗೆಯೇ ಎರಡು ರಾಜ್ಯಗಳ ನಡುವಿನ ನೀರು ಹಂಚಿಕೆ ವಿವಾದ ತಾರಕಕ್ಕೇರಿದ್ದರೂ ಪ್ರಧಾನಮಂತ್ರಿ ಮತ್ತು ರಾಜ್ಯದ ಸಂಸದರು ಮೌನಕ್ಕೆ ಶರಣಾಗಿರುವುದು ಖಂಡನೀಯ.ಪ್ರಾಧಿಕಾರದ ಆದೇಶ ಪಾಲಿಸಲು ಸರಕಾರ ಹೇಮಾವತಿ ಅಣೆಕಟ್ಟೆಯಿಂದಲೂ ನೀರು ಹರಿಸಲು ಮುಂದಾಗಿರುವುದು ಭವಿಷ್ಯದಲ್ಲಿ ತುಮಕೂರು ಜಿಲ್ಲೆಯ ಜನರ ಕುಡಿಯುವ ನೀರಿಗೂ ಸಂಚಕಾರ ತರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಅವರಿಗೆ ಕಳುಹಿಸಲು ಜಿಲ್ಲಾಧಿಕಾರಿ ಶ್ರೀನಿವಾಸ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್,ತಾಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ, ಯುವಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ತಾಲೂಕು ಕಾರ್ಯದರ್ಶಿ ತಿಮ್ಮೇಗೌಡ, ಯುವಘಟಕದ ಜಿಲ್ಲಾ ಸಂಚಾಲಕ ಮಹೇಶ್, ಮುಖಂಡರಾದ ಕೃಷ್ಣಪ್ಪ, ನಾರಾಯಣಪ್ಪ, ರಂಗಸ್ವಾಮಯ್ಯ, ಮೋಹನ್, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

Verified by MonsterInsights