ತುಮಕೂರು: ಗೌರಿಗಣೇಶ ಹಬ್ಬದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೀಲ್ಡ್ ಗೆ ಇಳಿದಿರುವ ನೂತನ ಎಸ್ಪಿ ಅಶೋಕ್ ವೆಂಕಟ್ ಅವರು, ತುಮಕೂರು ನಗರದ ವಿವಿಧೆಡೆ ಪಥ ಸಂಚಲನ ನಡೆಸಿದ್ದಾರೆ.
ಭಾನುವಾರ ತಡರಾತ್ರಿ ನಗರದ ವಿವಿಧೆಡೆ ಗಣೇಶ ಪೆಂಡಾಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು, ಸೋಮವಾರ ಬೆಳಿಗ್ಗೆ ನಗರದ ಜೆಸಿ ರಸ್ತೆ, ಮಂಡಿಪೇಟೆ, ಬಿಜಿ ಪಾಳ್ಯ, ಪಿ.ಹೆಚ್.ಕಾಲೋನಿ, ಕುರಿಪಾಳ್ಯ, ಬನಶಂಕರಿ ವೃತ್ತ ದಿಂದ ಮರಳೂರಿನ ರಸ್ತೆಗಳಲ್ಲಿ ಪಥಸಂಚಲನ ನೆಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರವಹಿಸಲು ಸೂಚನೆ ನೀಡಿದ್ದು, ಗಣೇಶ ಕೂರಿಸಲು ವಿಧಿಸಿರುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಆಯೋಜಕರಿಗೆ ಹಾಗೂ ಅಧೀನ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ನಗರ ಡಿಎಸ್ಪಿ ಶ್ರೀನಿವಾಸ್,ನಗರದ ಇನ್ಸ್ಪೆಕ್ಟರ್ ಗಳು ಮತ್ತು ತುಮಕೂರು ನಗರ ಉಪವಿಭಾಗ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.