ತುಮಕೂರು: ಹಲ್ಲೆ ಪ್ರಕರಣವೊಂದರಲ್ಲಿ ಸಾಕ್ಷಿಯಾಗಿದ್ದವನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪ್ರಕರಣದಲ್ಲಿ ದರ್ಶನ್ ತೂಗದೀಪ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ಗೌಡ ಮೇಲೆ ಪ್ರಕರಣ ದಾಖಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಓಪನ್ ಮಾಡಲಾಗಿದೆ ಎನ್ನಲಾಗಿದೆ.
ನಗರದ ಎನ್.ಇ.ಪಿ.ಎಸ್.ಠಾಣೆಯ ಹಿಂಭಾಗದಲ್ಲಿರುವ ಚಾಯ್ಸ್ ವಾಟರ್ ಕಂಪನಿಯಲ್ಲಿ ಕೆಲಸಕ್ಕೆ ಇದ್ದ ಗಿರೀಶಗೌಡ ಎಂಬುವವ, ಕಂಪನಿಯ ಮಾಲೀಕರಿಗೆ ಹಣಕಾಸಿನ ವ್ಯವಹಾರದಲ್ಲಿ ಮೋಸ ಮಾಡಿದ ಪರಿಣಾಮ 2016ರಲ್ಲಿ ಕೆಲಸದಿಂದ ತೆಗೆದು ಹಾಕಿದ್ದರು.
ಇದರಿಂದ ಸಿಟ್ಟಿಗೆದ್ದ ಗಿರೀಶ್ ಗೌಡ ಮಾಲೀಕರಾದ ನಾರಾಯಣ್ ಅವರ ಕಾರನ್ನು ಅಡ್ಡಗಟ್ಟಿ,ರಿಪೀಸ್ ಪಟ್ಟಿಯಿಂದ ತಲೆಗೆ ಹೊಡೆದು ಗಾಯಪಡಿಸಿದ್ದಲ್ಲದೆ,ಕಾರಿನ ಗ್ಲಾಸ್ ಒಡೆದು ಕೊಲೆ ಬೆದರಿಕೆ ಹಾಕಿದ್ದ ಸಂಬಂಧ ಎನ್.ಇ.ಪಿ.ಎಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪ್ರಕರಣದ ಸಾಕ್ಷಿಯಾಗಿದ್ದ ಯತೀಶ್ ಅವರ ಮೇಲೆ 28-08-2023ರಂದು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ನೀರಿನ ಬಾಟಲ್ ಗಳನ್ನು ತುಂಬಿಸಿಕೊಂಡು ಬಂದ ಗಿರೀಶ್ ಗೌಡ ಲಾಂಗ್ ನಿಂದ ಹಲ್ಲೆ ನಡೆಸಿದ್ದು,ಯತೀಶನಿಗೆ ಪೆಟ್ಟು ಬಿದ್ದು,ರಕ್ತಗಾಯವಾಗಿತ್ತು.
ಈ ಸಂಬಂಧ ಆತ ನಗರ ಠಾಣೆಗೆ ದೂರು ನೀಡಿದ್ದು, ಸದರಿ ದೂರಿನ ಅನ್ವಯ ಆರೋಪಿ ಗಿರೀಶ್ ಗೌಡ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಬೇರೆ ಬೇರೆ ಪ್ರಕರಣಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು, ಲಾಂಗ್, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಿದ್ದ ಈತನ ವಿರುದ್ದ ರೌಡಿಶೀಟರ್ ತೆರೆಯಲಾಗಿದೆ ಎಂದು ತಿಳಿದು ಬಂದಿದೆ.
ಡಿಬಾಸ್ ಹೆಸರು ದುರ್ಬಳಕೆ: ದರ್ಶನ್ ತೂಗದೀಪ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಎಂದು ಹೇಳಿಕೊಳ್ಳುವ ಗಿರೀಶ್ ಗೌಡ ಅಧಿಕೃತವಾಗಿ ಡಿ ಬಾಸ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷನಲ್ಲ ಎಂಬ ಆರೋಪ ಕೇಳಿಬಂದಿದೆ.