ಕಳ್ಳ ಮದ್ವೆಯಂತೆ ಅರಸು ಜಯಂತಿ ಮಾಡ್ಬೇಕಾ..?

ಡೆಸ್ಕ್
1 Min Read

ತುಮಕೂರು: ದೇವರಾಜ ಅರಸು ಅವರು ಜಾರಿಗೆ ತಂದ ಕಾಯ್ದೆಗಳು ಎಲ್ಲ ಸಮುದಾಯಗಳಿಗೂ ಅನುಕೂಲವನ್ನು ಮಾಡಿದ್ದವು, ಆದರೆ ಇಂದು ಮೂರಡಿ ಫೋಟೋ ಇಟ್ಟು ಮೆರವಣಿಗೆ ಮಾಡಲು ಆಗದಂತಹ ಸ್ಥಿತಿಯಲ್ಲಿ ಸರ್ಕಾರ ಇದೆಯೇ? ದೇವರಾಜ ಅರಸು ಜನ್ಮ ದಿನಾಚರಣೆಯನ್ನು ಕಳ್ಳ ಮದ್ವೆ ಮಾಡಿದಂತೆ ಮಾಡಬೇಕಾ ಎಂದು ನಿವೃತ್ತ ತಹಶೀಲ್ದಾರ್ ಸಣ್ಣಮುದ್ದಯ್ಯ ತರಾಟೆಗೆ ತೆಗೆದುಕೊಂಡರು.

ದಿ.ದೇವರಾಜ ಅರಸು ಜನ್ಮದಿನಾಚರಣೆಯನ್ನು
ಹಿಂದುಳಿದ ವರ್ಗಗಳ ಇಲಾಖೆ ಆಯೋಜನೆ ಮಾಡುವುದು ಹೀಗಾ? ಇಪ್ಪತ್ತೈದು ವರ್ಷಗಳ ಕಾಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿದ್ದೇನೆ, ಸನ್ಮಾನ ಮಾಡಿ ಎಂದು ಅರ್ಜಿ ಹಾಕಿರಲಿಲ್ಲ, ಕನಿಷ್ಠ ಆಮಂತ್ರಣ ಪತ್ರಿಕೆಯಲ್ಲಿ ಸನ್ಮಾನಿತರ ಹೆಸರು ಹಾಕಿಸುವ ಯೋಗ್ಯತೆ ಇಲ್ಲವಾ? ಇಂತಹ ಸನ್ಮಾನ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಕಾಟಾಚಾರಕ್ಕೆ ಜಯಂತಿ ಮಾಡುವುದನ್ನು ಬಿಟ್ಟು ನಿಜವಾಗಿಯೂ ದೇವರಾಜ ಅರಸು ಅವರನ್ನು ಯುವ ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕು ಅದನ್ನು ಬಿಟ್ಟು ಶಿಫಾರಸ್ಸು ಮಾಡಿದವರನ್ನು ಪ್ರಶಸ್ತಿ, ಸನ್ಮಾನಕ್ಕೆ ಆಯ್ಕೆ ಮಾಡುವುದನ್ನು ಬಿಟ್ಟು ಜನಾಭಿಪ್ರಾಯವನ್ನು ಮೂಡಿಸಿ ಎಂದರು.

ನೀವೇನು ಮನುಸ್ಮೃತಿಯವರಲ್ಲಾ, ಹಳ್ಳಿಗಳಲ್ಲಿ ದನ ಕಾಯುವವರಿಗೆಲ್ಲ ಕೆಲಸ ಕೊಟ್ಟವರನ್ನು ಸ್ಮರಿಸಬೇಕಾದ ನಾವೇ ಈ ರೀತಿ ಕಳ್ಳ ಮದ್ವೆಯಂತೆ ಕಾರ್ಯಕ್ರಮ ಮಾಡಬೇಕಾ? ಹಿಂದುಳಿದ ವರ್ಗಗಳ ಇಲಾಖೆಗೆ ಅರಸು ಅವರ ಮೆರವಣಿಗೆ ಮಾಡಲು ಆಗದಿದ್ದರೆ ಹೇಳಿ ನಾವೇ ಮಾಡುತ್ತೇವೆ, ಮುಂದೆ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವರಾಜ ಅರಸು ಜಯಂತಿಯಲ್ಲಿ ಲೋಪವಾಗಿರುವುದು ನಿಜ, ಇಲಾಖೆ ಅಧಿಕಾರಿಗಳು ಸಮುದಾಯಗಳಿಗೆ ನೋವಾಗದಂತೆ ಕಾರ್ಯಕ್ರಮ ರೂಪಿಸಬೇಕು, ದೇವರಾಜ ಅರಸು ಜಯಂತಿಯನ್ನು ಅದ್ದೂರಿಯಾಗಿ ಮಾಡಬೇಕು, ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ಮಾಡಬೇಕು ಎಂದು ಶಾಸಕ ಜ್ಯೋತಿಗಣೇಶ್ ಎಚ್ಚರಿಕೆ ನೀಡಿದರು.

Share this Article
Verified by MonsterInsights