ವಿವಾದಕ್ಕೆ ಗ್ರಾಸವಾದ ವಿವಿ ಗೌರವ ಡಾಕ್ಟರೇಟ್
ತುಮಕೂರು: ತುಮಕೂರು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಅಂಗವಾಗಿ ಪ್ರದಾನ ಮಾಡುತ್ತಿರುವ ಗೌರವ ಡಾಕ್ಟರೇಟ್ ಈಗ ವಿವಾದಕ್ಕೆ ಕಾರಣವಾಗಿದ್ದು, ಅಕ್ಕಿಗಿರಣಿ ಉದ್ಯಮಿ ರಮೇಶ್ ಬಾಬು ಅವರ ಸಮಾಜಸೇವೆಯನ್ನು ಪರಿಗಣಿಸಿ ವಿವಿಯ ತಜ್ಞರು ಗೌರವ ಡಾಕ್ಟರೇಟ್ಗೆ ಶಿಫಾರಸ್ಸು ಮಾಡಿದ್ದು, ರಾಜ್ಯಪಾಲರು ಅನುಮೋದನೆಗೊಳಿಸಿದ್ದು, ಆ.7ರಂದು ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.
ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ತ್ಯಾಮಗೊಂಡ್ಲುವಿನವರಾದ ರಮೇಶ್ ಬಾಬು ಅವರು, ಕಲ್ಕಿ ಭಗವಾನ್, ಅಮ್ಮ ಭಗವಾನ್ ಭಕ್ತರಾಗಿದ್ದು, ತುಮಕೂರಿನಿಂದ ಕಲ್ಕಿ ಭಗವಾನ್ ಮತ್ತು ಅಮ್ಮ ಭಗವಾನ್ ದರ್ಶನಕ್ಕೆ ಭಕ್ತರನ್ನು ಕರೆದೊಯ್ಯುವ ಮೂಲಕ ಪ್ರಖ್ಯಾತಿಯನ್ನುಗಳಿಸಿದರು, ನಂತರ ಅಕ್ಕಿ ಗಿರಣಿ ಉದ್ಯಮಿಗೆ ಕಾಲಿಟ್ಟ ರಮೇಶ್ ಬಾಬು ಅವರು ಅಂತರಸನಹಳ್ಳಿಯಲ್ಲಿ ಭಗವತಿ ರೈಸ್ಮಿಲ್ ನಡೆಸುತ್ತಿದ್ದು, ಸತ್ಸಂಗ, ಧಾರ್ಮಿಕ ಸೇವೆಗಳಿಗೆ ಉಚಿತವಾಗಿ ಅಕ್ಕಿಯನ್ನು ನೀಡುವ ಮೂಲಕ ಕೊಡುಗೈ ದಾನಿಯಾಗಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಇತ್ತಿಚೆಗೆ ಪಾವಗಡದ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ ಅವರು ಪ್ರಾರಂಭಿಸಿರುವ ಬಿಸಿಯೂಟ ಯೋಜನೆಗೆ ಸಂಪೂರ್ಣ ಸಹಕಾರ ನೀಡುತ್ತಿರುವವರಲ್ಲಿ ಮೊದಲಿಗರಾಗಿರುವ ರಮೇಶ್ ಬಾಬು ಧಾರ್ಮಿಕ ಮುಖಂಡರಾಗಿಯೂ ಗುರುತಿಸಿಕೊಂಡಿದ್ದು, ಪ್ರಸ್ತುತ ಎಸ್.ಎಸ್.ಪುರಂನಲ್ಲಿರುವ ಕನ್ನಿಕಾ ಪರ ಮೇಶ್ವರಿ ದೇಗುಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಮೊದಲಿಗರಾಗಿ, ಕೊಡುಗೈ ದಾನಿಯಾಗಿರುವ ರಮೇಶ್ ಬಾಬು ಅವರ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದ್ದು, ಸಮಾಜಸೇವೆಯ ಹೊರತಾಗಿ ಧಾರ್ಮಿಕ ಸೇವಾಕಾರ್ಯಗಳಲ್ಲಿಯೇ ಹೆಚ್ಚೆಚ್ಚು ತೊಡಗಿಸಿಕೊಂಡಿರುವ ಉದ್ಯಮಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ಏತಕ್ಕೆ ಎಂಬ ಪ್ರಶ್ನೆಯನ್ನು ಪ್ರಜ್ಞಾವಂತರು ವ್ಯಕ್ತಪಡಿಸಿದ್ದಾರೆ.
ಋಣ ತೀರಿಸಲು ಮುಂದಾಯ್ತೆ ವಿವಿ!!
ಜಾತಿಯ ನಂಟೋ,, ಅಕ್ಕಿ ವ್ಯಾಪಾರವೋ: ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾಗಿರುವ ಬಿಸಿಯೂಟ ಯೋಜನೆಯ ಹಿಂದೆ ಸಾಕಷ್ಟು ಸಹಕಾರ ನೀಡಿರುವ ರಮೇಶ್ ಬಾಬು ಅವರ ಋಣವನ್ನು ತೀರಿಸಲು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ, ಇದರೊಂದಿಗೆ ಕುಲಪತಿಗಳಾಗಿ ಪ್ರೊ.ವೆಂಕಟೇಶ್ವರಲು ಹಾಗೂ ಕೆಲ ಬಿಜೆಪಿಯ ಮುಖಂಡರು ರಮೇಶ್ ಬಾಬು ಅವರಿಗೆ ಗೌರವ ಡಾಕ್ಟರೇಟ್ ಕೊಡಿಸಲು ಅಹರ್ನಿಶಿ ಶ್ರಮಿಸಿದ್ದಾರೆ ಎಂಬ ಮಾತುಗಳು ವಿಶ್ವ ವಿದ್ಯಾಲಯದ ಆವರಣದೊಳಗೆ ಹರಿದಾಡುತ್ತಿದೆ.