ಕನ್ನಡ ಚಿತ್ರರಂಗ ಕಂಡ ಖ್ಯಾತ ಹಾಸ್ಯನಟ ಹಾಸ್ಯ ಚಕ್ರವರ್ತಿ ನರಸಿಂಹರಾಜು 100ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬಾಲ್ಯದಲ್ಲೇ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಮುಂದೆ ಚಿತ್ರರಂಗಕ್ಕೂ ಬಂದು ಪ್ರೇಕ್ಷಕರನ್ನು ರಂಜಿಸಿದರು. ಕನ್ನಡದ ಚಾರ್ಲಿ ಚಾಪ್ಲಿನ್ ಎನಿಸಿಕೊಂಡಿದ್ದ ಅವರು ಕನ್ನಡ ಚಿತ್ರರಂಗದ ಮೊದಲ ಸ್ಟಾರ್ ಕಮೆಡಿಯನ್. ನಟನೆಯೊಂದಿಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದವರು ನರಸಿಂಹ ರಾಜು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
ಡಾ. ರಾಜ್ ಕುಮಾರ್ ಮುನ್ನ ಕನ್ನಡ ಚಿತ್ರರಂಗದಲ್ಲಿ 100 ಸಿನಿಮಾಗಳನ್ನು ಪೂರೈಸಿದ ನಟ ನರಸಿಂಹ ರಾಜು. ಜುಲೈ 24, 1923 ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರಾಮರಾಜು ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ ಅವರು ಜನಿಸಿದರು. ಬಾಲ್ಯದಿಂದಲೇ ಕಲೆಯನ್ನು ಬದುಕಾಗಿಸಿಕೊಂಡರು. ತಮ್ಮ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡು ಹಾಸ್ಯ ಪಾತ್ರಗಳಲ್ಲಿ ನಟಿಸಿದರು. ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪೆನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪೆನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪೆನಿ ಹೀಗೆ ಹಲವು ನಾಟಕ ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು.
‘ಬೇಡರ ಕಣಪ್ಪ’ ಚಿತ್ರದ ಮೂಲಕ ಡಾ. ರಾಜ್ ಕುಮಾರ್ ನಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ಅದೇ ಸಿನಿಮಾದಲ್ಲಿ ಕಾಶೀನಾಥ ಶಾಸ್ತ್ರಿ ಪಾತ್ರದಲ್ಲಿ ನರಸಿಂಹ ರಾಜು ಚಿತ್ರರಂಗ ಪ್ರವೇಶವಾಯಿತು. ಮುಂದೆ ‘ಸ್ಕೂಲ್ ಮಾಸ್ಟರ್’, ರಣಧೀರ ಕಂಠೀರವ, ಜೇನು ಗೂಡು, ವೀರ ಕೇಸರಿ, ಕಸ್ತೂರಿ ನಿವಾಸ, ಶರಪಂಜರ, ಗಂಧದಗುಡಿ, ಕಿಟ್ಟುಪುಟ್ಟು, ಕಿಲಾಡಿ ಜೋಡಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು.
ಮದ್ರಾಸಿನಿಂದ ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆ ಬೆಂಗಳೂರಿಗೆ ಸ್ಥಳಾಂತರವಾದಾಗ, ಎಲ್ಲರಂತೆ ನರಸಿಂಹರಾಜು ಅವರೂ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿದರು. ತಿಪಟೂರಿನ ನಾಟಕದ ಕ್ಯಾಂಪ್ನಲ್ಲಿ ಅವರ ಮಕ್ಕಳೆಲ್ಲರೂ ಆಟವಾಡುತ್ತಿದ್ದಾಗ ಅಚಾನಕ್ಕಾಗಿ ಅವರ ಮಗ ಶ್ರೀಕಾಂತ ಬೆಂಕಿಯ ಅಪಘಾತಕ್ಕೀಡಾಗುತ್ತಾನೆ. ಅದು ನರಸಿಂಹರಾಜು ಅವರ ಮೇಲೆ ಅಗಾಧ ಪರಿಣಾಮ ಬೀರಿತ್ತು. 1979ರ ಜುಲೈ 20ರಂದು ತಮ್ಮ 56ನೇ ವಯಸ್ಸಿಗೆ ಹೃದಯಾಘಾತದಿಂದ ನರಸಿಂಹರಾಜು ನಿಧನರಾದರು.