ಮಾದಕ ವಸ್ತುಗಳಿಗಾಗಿ ವಿದೇಶಿ ಪ್ರಜೆಗಳಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ..?

ತುಮಕೂರು: ಕಳೆದ ಎರಡು ತಿಂಗಳ ಹಿಂದೆ ನಗರದ ದಿಬ್ಬೂರಿನಲ್ಲಿ ಪ್ರಾರಂಭವಾಗಿರುವ ವಿದೇಶಿ ಪ್ರಜೆಗಳ ನಿರಾಶ್ರಿತರ ಕೇಂದ್ರದಲ್ಲಿ ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಿಬ್ಬಂದಿ ಮೇಲೆ ವಿದೇಶಿ ಪ್ರಜೆಗಳು ಹಲ್ಲೆ ನಡೆಸಿದ್ದಾರೆ.

ಉಗಾಂಡ, ನೈಜೀರಿಯಾ, ಬಾಂಗ್ಲಾದೇಶ ಸೇರಿದಂತೆ ಐದು ದೇಶಗಳ 27 ವಿದೇಶಿ ಪ್ರಜೆಗಳು ನಿರಾಶ್ರಿತರ ಕೇಂದ್ರದಲ್ಲಿದ್ದು, ಕೇಂದ್ರ ಪ್ರಾರಂಭವಾದಗಿನಿಂದಲೂ ಒಂದಲ್ಲ ಒಂದು ಕಿರಿಕ್ ವಿದೇಶಿ ಪ್ರಜೆಗಳು ಮಾಡುತ್ತಿದ್ದು, ರಕ್ಷಣೆ ನೀಡಲು ಪೊಲೀಸರು ಹೈರಾಣಾಗಿದ್ದಾರೆ.

ನಿರಾಶ್ರಿತ ಕೇಂದ್ರದಲ್ಲಿರುವ ವಿದೇಶಿ ಪ್ರಜೆಗಳ ಹಾರಾಟ, ಕೀರಾಟದಿಂದ ಅಕ್ಕಪಕ್ಕದ ಮನೆಯವರಲ್ಲ ರೋಸಿ ಹೋಗಿದ್ದು, ಪ್ರತಿದಿನ ರಾತ್ರಿ ಕೂಗಾಟದ ಕ್ವಾಟ್ಲೆ ಹೆಚ್ಚಾಗಿದ್ದು ಈ ಹಿಂದೆ ಪೊಲೀಸ್ ಸಿಬ್ಬಂದಿ, ಅಡುಗೆ ಸಿಬ್ಬಂದಿ ಮೇಲೆ ಜಗಳ ಮಾಡಿ ಸುದ್ದಿಯಾಗಿದ್ದರು.

ಪಾಸ್ ಪೋರ್ಟ್, ವೀಸಾ ಅವಧಿ ಮುಗಿದಿರುವ ವಿದೇಶಿ ಪ್ರಜೆಗಳನ್ನು ಈ ನಿರಾಶ್ರಿತ ಕೇಂದ್ರದಲ್ಲಿ ಬಂಧಿಸಲಾಗಿದ್ದು, ಬಂಧನದಲ್ಲಿರುವ ವಿದೇಶಿ ಪ್ರಜೆಗಳ ರಕ್ಷಣೆ ಹಾಗೂ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದ್ದು, ಊಟ ಹಾಗೂ ರಕ್ಷಣೆಗೆ ಹೋಗುವ ಸಿಬ್ಬಂದಿಗಳೊಂದಿಗೆ ಜಗಳ, ಬೈಗುಳ ಸಾಮಾನ್ಯ ಎನ್ನುವಂತಾಗಿದೆ.

ನಶೆಗಾಗಿ ಕಾದಾಟ, ನಶೆಯಲ್ಲಿಯೇ ಹಲ್ಲೆ: ನಿರಾಶ್ರಿತ ಕೇಂದ್ರದಲ್ಲಿರುವ ವಿದೇಶಿ ಪ್ರಜೆಗಳು ಮಾದಕ ವಸ್ತುಗಳನ್ನು ಬಳಸುತ್ತಿರುವ ಆರೋಪ ಕೇಳುಬಂದಿದ್ದು, ಮಾದಕ ವಸ್ತುಗಳ ಸೇವನೆ ಬಳಿಕ ರಕ್ಷಣಾ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿಗಳ ಮೇಲೆ ಜಗಳ ತೆಗೆಯುತ್ತಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ನಿರಾಶ್ರಿತ ಕೇಂದ್ರದಲ್ಲಿರುವರನ್ನು ನೋಡಲು ಬರುವ ವಿದೇಶಿ ಪ್ರಜೆಗಳೇ ಇವರಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದು, ಕೆಲ ದಿನಗಳ ಹಿಂದೆ ಬಂದ ವಿದೇಶಿ ಪ್ರಜೆಗಳಿಂದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎನ್ನಲಾಗಿದೆ.

ನಿರಾಶ್ರಿತ ಕೇಂದ್ರದಲ್ಲಿ ಮಾದಕ ವಸ್ತುಗಳ ಬಳಕೆ ಆರೋಪದ ಬೆನ್ನಲ್ಲೆ ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ತಪಾಸಣೆಗೆ ಮುಂದಾಗಿದ್ದು, ಈ ವೇಳೆ ಉಗಾಂಡ ದೇಶದ ನಾಲ್ವರು ಮಹಿಳೆಯರು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಚಂದ್ರಕಲಾ, ಪೇದೆ ತಾಸೀರಾ ಬಾನು ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ.

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಅವರ ಕೈ ಅನ್ನು ಕಚ್ಚಿದ್ದು, ನಿರಾಶ್ರಿತ ಕೇಂದ್ರದ ಸೂಪರಿಂಟೆಂಡೆಂಟ್ ಮಾರಪ್ಪ ಅವರ ಮೇಲೆ ಹಲ್ಲೆ ಮಾಡಿದ್ದು, ಅಡುಗೆ ಸಹಾಯಕಿ ಲಕ್ಷ್ಮೀ ಅವರ ಕೈ ಮುರಿದಿದೆ ಎನ್ನಲಾಗಿದ್ದು, ಹಲ್ಲೆ ನಡೆಸಿದ ವಿದೇಶಿ ಆರೋಪಿಗಳನ್ನು ವಶಕ್ಕೆ ಪಡೆದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿದೆ.

Verified by MonsterInsights