ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಸೋಲಿಗೆ ಪ್ರಮುಖ ಕಾರಣರಾಗಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ದೇವೇಗೌಡರ ತವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ನನ್ನ ಸೋಲಿಗೆ ಕಾರಣವಾದವರನ್ನು ಸೋಲಿಸಿ ಎಂದು ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ಕೆ.ಎನ್.ರಾಜಣ್ಣರನ್ನು ಸೋಲಿಸಲು ಶತಾಯಗತಾಯ ಪ್ರಯತ್ನವನ್ನು ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಹ ಪ್ರಚಾರ ನಡೆಸುವ ಮೂಲಕ ಸೋಲಿಸುವಂತೆ ಕರೆ ನೀಡಿದ್ದರು.
ದೇವೇಗೌಡರ ಕರೆಯ ನಡುವೆಯೂ ಕೆ.ಎನ್.ರಾಜಣ್ಣ ಅವರ ಕೈ ಹಿಡಿದ ಮತದಾರರು 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ನೀಡಿದ್ದರು. ಭರ್ಜರಿ ಅಂತರದಿಂದ ಗೆದ್ದ ಬಳಿಕ ಸಚಿವ ಸಂಪುಟ ಸೇರಿದ್ದ ಕೆ.ಎನ್.ರಾಜಣ್ಣ ಅವರು ಸಹಕಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಿಎಂ ಸಿದ್ದರಾಮಯ್ಯ
ಕೆ.ಎನ್.ರಾಜಣ್ಣ ಅವರನ್ನು ಹಾಸನ ಜಿಲ್ಲಾ ಉಸ್ತುವಾರಿಯಾಗಿ ನೇಮಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ, ಸಾಂಪ್ರದಾಯಿಕ ಎದುರಾಳಿಯಾಗಿರುವ ಜೆಡಿಎಸ್ ನ ದಳಪತಿಗಳನ್ನು ಕಟ್ಟಿ ಹಾಕುವುದರೊಂದಿಗೆ ಪಕ್ಷವನ್ನು ಬಲಗೊಳಿಸುವ ಜವಾಬ್ದಾರಿಯನ್ನು ಆಪ್ತನಿಗೆ ವಹಿಸಿದ್ದಾರೆ ಎನ್ನಲಾಗಿದೆ.
ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡುವ ಸಮರ್ಥ ನಾಯಕನಿಗೆ ಜೆಡಿಎಸ್ ಭದ್ರಕೋಟೆಯ ಜವಾಬ್ದಾರಿಯನ್ನು ವಹಿಸಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಯನ್ನು ವಹಿಸಲಾಗಿದ್ದು, ಹಾವು-ಮುಂಗುಸಿಯಂತಿರುವ ದಳಪತಿಗಳನ್ನು ಮೆಟ್ಟಿ ಕಾಂಗ್ರೆಸ್ ಗೆ ಭದ್ರ ನೆಲೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಪಕ್ಷ ಹೊಣೆಗಾರಿಕೆಯನ್ನು ನೀಡಿದೆ.
ಜಿಲ್ಲೆಗೆ ತಪ್ಪಿದ ನೀರಿನ ಹಾಹಾಕಾರ
ಜೆಡಿಎಸ್ ವಿರುದ್ಧ ಕಟು ಟೀಕೆಯನ್ನು ಮಾಡುವ ಕೆ.ಎನ್.ರಾಜಣ್ಣ ಅವರಿಗೆ ಹಾಸನ ಉಸ್ತುವಾರಿಯನ್ನು ವಹಿಸುವ ಮೂಲಕ ತುಮಕೂರು ಜಿಲ್ಲೆಯ ನೀರಿನ ಬವಣೆಯನ್ನು ನೀಗಿಸಲು ಸರ್ಕಾರ ಮುಂದಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಲದಲ್ಲಿ ತುಮಕೂರು ಜಿಲ್ಲೆಗೆ ಹಂಚಿಕೆಯಾಗಿದ್ದ ಹೇಮಾವತಿ ನೀರನ್ನು ಸಂಪೂರ್ಣವಾಗಿ ಹರಿಸುವ ಪ್ರಯತ್ನವನ್ನು ಮಾಡಿದ್ದರು. ಮಳೆಯಿಂದ ಕೆರೆಕಟ್ಟೆಗಳು ತುಂಬಿದ್ದರಿಂದ ನಿಗದಿಯಾಗಿದ್ದ ನೀರನ್ನು ಹರಿಸುವ ಅವಕಾಶವಿದ್ದರೂ ಸಂಗ್ರಹಕ್ಕೆ ಅವಕಾಶವಿಲ್ಲದಂತೆ ಆಗಿತ್ತು.
ಈಗ ಕೆರೆಕಟ್ಟೆಗಳು ಖಾಲಿಯಾಗಿದ್ದು ತುಮಕೂರು ನಗರಕ್ಕೆ ನೀರು ಪೂರೈಸುವ ಬುಗುಡನಹಳ್ಳಿ ಕೆರೆಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದ್ದು, ನೀರಿನ ಹಾಹಾಕಾರವನ್ನು ತಡೆಯುವ ನಿಟ್ಟಿನಲ್ಲಿ ರಾಜಣ್ಣ ಅವರು ಹಾಸನ ಉಸ್ತುವಾರಿಯಾಗಿರುವುದು ಪರೋಕ್ಷವಾಗಿ ತುಮಕೂರು ಜಿಲ್ಲೆಗೆ ನೀರಾವರಿ ವಿಚಾರದಲ್ಲಿ ಅನುಕೂಲವಾಗಲಿದೆ ಎನ್ನುವ ಮಾತುಗಳು ವ್ಯಕ್ತವಾಗಿದೆ.