ತುಮಕೂರು: ಯಲ್ಲಾಪುರದಲ್ಲಿನ ಟೈಲ್ಸ್ ಅಂಗಡಿ ಮಾಲೀಕನ ಕೊಲೆ ಪ್ರಕರಣವನ್ನು ಬೇಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಿಯತಮನಿಂದಲೇ ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಮೇ.20ರಂದು ರಾತ್ರಿ ಟೈಲ್ಸ್ ಅಂಗಡಿಯಲ್ಲಿದ್ದ ಚಿಕ್ಕಮಗಳೂರು ಮೂಲದ ಝಾಕೀರ್ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ದ್ವೇಷಕ್ಕೆ ಕೊಲೆ: ಚಿಕ್ಕಮಗಳೂರು ಮೂಲದ ಝಾಕೀರ್, ಕುಬ್ರಾನ್ ಈಕೆಯ ಮಗಳು ರಬಾನಿ ನಡುವೆ ಕ್ಷುಲ್ಲಕ ಕಾರಣಕ್ಕೆ ವರ್ಷದ ಹಿಂದೆ ಜಗಳವಾಗಿದ್ದು, ಅದೇ ವಿಚಾರಕ್ಕೆ ದ್ವೇಷ ಬೆಳೆಸಿಕೊಂಡಿದ್ದ ಕುಬ್ರಾನ್ ಹಾಗೂ ರಬಾನಿ ಇಬ್ಬರು ಸೇರಿ, ರಬಾನಿ ಪ್ರಿಯತಮ ವಿಕಾಸ್ ಮೂಲಕ ಝಾಕೀರ್ ಕೊಲೆ ಮಾಡಿಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಕುಬ್ರಾನ್, ರಬಾನಿ ಮತ್ತು ಕೊಲೆಯಾಗಿರುವ ಝಾಕೀರ್ ನಡುವೆ ವ್ಯವಹಾರ ಹಾಗೂ ಅಕ್ರಮ ಸಂಬಂಧವಿದ್ದು, ಈ ವಿಚಾರದಲ್ಲಿಯೇ ಮನಸ್ತಾಪವಾಗಿ ಝಾಕೀರ್ ಕುಬ್ರಾನ್ ಮತ್ತು ರಬಾನಿಯಿಂದ ದೂರವಾಗಿ, ತುಮಕೂರಿಗೆ ಬಂದು ಟೈಲ್ಸ್ ವ್ಯವಹಾರ ಮಾಡುತ್ತಿದ್ದ.
ಝಾಕೀರ್ ದೂರವಾಗಿ ತುಮಕೂರಿನಲ್ಲಿ ನೆಲೆಸಿದ್ದರಿಂದ ಸಿಟ್ಟಿಗೆದ್ದ ಕುಬ್ರಾನ್ ಹಾಗೂ ರಬಾನಿ ಆತನ ಮೇಲೆ ಹಗೆ ಸಾಧಿಸಲು ಶುರುವಿಟ್ಟುಕೊಂಡಿದ್ದರು, ಕಳೆದ ಒಂದು ವರ್ಷದಿಂದ ಸಮಯ ಕಾದಿದ್ದ ಕುಬ್ರಾನ್ ಹಾಗೂ ರಬಾನಿಗೆ ಕೆ.ಬಿ.ಕ್ರಾಸ್ ಮೂಲದ ವಿಕಾಸ್ ಪರಿಚಯವಾಗಿದೆ, ರಬಾನಿಯನ್ನು ಪ್ರೀತಿಸುತ್ತಿದ್ದ ವಿಕಾಸ್ ಮೂಲಕವೇ ಝಾಕೀರ್ ಹತ್ಯೆ ಮಾಡಲು ಯೋಜನೆ ರೂಪಿಸಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ:-ಟೈಲ್ಸ್ ಅಂಗಡಿ ಮಾಲೀಕನ ಬರ್ಬರ ಹತ್ಯೆ
ಕೊಲೆಗೂ ಮುನ್ನ ವಾಮಾಚಾರ: ಕೊಲೆಯಾಗಿರುವ ಝಾಕೀರ್, ಕುಬ್ರಾನ್ ಇಬ್ಬರು ಮಾಟಮಂತ್ರ ಮಾಡುತ್ತಿದ್ದರು ಎನ್ನಲಾಗಿದ್ದು, ಇಬ್ಬರು ಅನ್ಯೋನ್ಯವಾಗಿದ್ದು, ಕುಬ್ರಾನ್ ಮಗಳು ರಬಾನಿ ಜೊತೆಗೂ ಝಾಕೀರ್ ಸಂಬಂಧ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಝಾಕೀರ್ ಚಿಕ್ಕಮಗಳೂರು ತೊರೆದು ತುಮಕೂರಿಗೆ ಬಂದ ನಂತರ ಕುಬ್ರಾನ್ ಹಾಗೂ ರಬಾನಿ ಸಂಪರ್ಕ ಕಡಿದುಕೊಂಡಿದ್ದ, ಈ ನಡುವೆಯೇ ವಿಕಾಸ್ ರಬಾನಿ ಜೊತೆಗೆ ಸಂಪರ್ಕ ಬೆಳೆಸಿಕೊಂಡಿದ್ದ ಎನ್ನಲಾಗಿದೆ.ತುಮಕೂರಿಗೆ ಬಂದ ಝಾಕೀರ್ ಟೈಲ್ಸ್ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದ ವಿಚಾರ ತಿಳಿದಿದ್ದ ಕುಬ್ರಾನ್ ಹಾಗೂ ರಬಾನಿ ವಿಕಾಸ್ ನನ್ನು ವಿಶ್ವಾಸಕ್ಕೆ ಪಡೆದು ಝಾಕೀರ್ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ.
ಝಾಕೀರ್ ನನ್ನು ಕೊಲೆ ಮಾಡುವ ಮುಂಚೆ ಕುಬ್ರಾನ್ ಹಾಗೂ ರಬಾನಿ ಝಾಕೀರ್ ಫೋಟೋ ಇಟ್ಟು ಪೂಜೆ ಮಾಡಿ, ವಿಕಾಸ್ ನನ್ನು ಪ್ರೇರೇಪಿಸಿ ಕಳುಹಿಸಿದ್ದ, ವಿಕಾಸ್ ಪ್ರೀತಿಯ ಬಲೆಯೊಳಗೆ ಸಿಲುಕಿ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ವಿಕಾಸ್ ಗೆ ಸಹಾಯ ಮಾಡಿದ ಸ್ನೇಹಿತನೂ ಜೈಲು ಸೇರಿದ್ದಾನೆ
ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದ ಪಿಎಸ್ಐ ಪ್ರಸನ್ನಕುಮಾರ್ ಆರೋಪಿಗಳ ಎಡೆಮುರಿ ಕಟ್ಟಲು ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.