ತುಮಕೂರು: ನನಗೆ 85 ವರ್ಷ ಆಯ್ತು ನಾನು ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ದೆಹಲಿಯಲ್ಲಿಯೇ ಹೇಳಿದ್ದೇನೆ, ನನ್ನ ಬದಲಿಗೆ ಸೋಮಣ್ಣ ಬರ್ತಾರೆ, ಅವರನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಂಸದ ಜಿ.ಎಸ್.ಬಸವರಾಜು ಸಲಹೆ ನೀಡಿದರು.
ವೀರಶೈವ-ಲಿಂಗಾಯತರು ಹೀಗೆ ಕಿತ್ತಾಡ್ಕೊಂಡ್ರೆ ಊರಿಂದ ಹೋಡಿಸುತ್ತಾರೆ, ಇರೋ ಜಾಗವನ್ನು ಆಕ್ರಮಿಸಿಕೊಳ್ಳುತ್ತಾರೆ, ಅದಕ್ಕೆ ಕಾಲ ಸನ್ನಿಹಿತವಾಗಿದೆ, ವೀರಶೈವ-ಲಿಂಗಾಯತರು ಒಂದಾಗದಿದ್ದರೆ ಕಷ್ಟವಾಗಲಿದ್ದು, ವೀರಶೈವ-ಲಿಂಗಾಯತರನ್ನು ತುಳಿಯಲು ಬೇಕಾದ ಕುತಂತ್ರಗಳನ್ನು ಈಗಾಗಲೇ ಮಾಡಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ವೀರಶೈವ-ಲಿಂಗಾಯತರಲ್ಲಿಯೇ ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ನಮ್ಮ ನಮ್ಮಲ್ಲಿಯೇ ತಂದಿಕ್ಕಿ ತಮಾಷೆ ನೋಡುತ್ತಾರೆ, ಎಂಟು ಬಾರಿ ಚುನಾವಣೆಗೆ ನಿಂತು ಮೂರು ಬಾರಿ ಸೋತಿದ್ದೇನೆ, ಸೋಲಿಸಿದವರು ಸಹ ನಮ್ಮವರೇ ಎನ್ನುವುದು ನನಗೆ ಗೊತ್ತಿದೆ, ಗೆದ್ದಾಗಲೂ, ಸೋತಾಗಲೂ ಸಮಾಜಕ್ಕಾಗಿ ದುಡಿಯುತ್ತೇನೆ ಎಂದರು.
ರಾಜಕೀಯ ಲೆಕ್ಕಾಚಾರ ಮಾಡುವುದು ಆರ್ಟು ಅದೆಲ್ಲ ಎಲ್ಲರಿಗೂ ಸಿದ್ಧಿಸುವುದಿಲ್ಲ, ಮುಸ್ಲಿಂರು ವಿಧಾನಸಭೆ ಚುನಾವಣೆಯಲ್ಲಿ ಈ ಭಾರಿ ನಮಗೆ ವೋಟ್ ಹಾಕಿಲ್ಲ, ರಾತ್ರಿ 2 ಗಂಟೆಗೆ ಮುಸ್ಲಿಂರ ಹತ್ರ ಹೋಗಿದ್ದೆ ಏನ್ಮಾಡ್ತೀರಾ ಅಂತ ಕೇಳ್ದೆ, ಚುನಾವಣೆಯಲ್ಲಿ ನೀವು ನಿಮಗೆ ವೋಟ್ ಹಾಕ್ಕೊಂಡ್ರೆ ನಾನು ಗೆಲ್ತೀನಿ, 46 ಸಾವಿರ ವೋಟ್ ಅವ್ರಿಗೆ (ಕಾಂಗ್ರೆಸ್) ಬರುತ್ತೇ ಅಂದಿದೆ, ಅಷ್ಟೇ ಬಂತು ಎಂದರು.
ನನಗೆ ಶುಗರ್ ಬಂದು 55 ವರ್ಷ ಆಯ್ತು, ಭಗವಂತ ವಾರೆಂಟ್ ಯಾವಾಗ ಕೊಡ್ತಾನೋ ಗೊತ್ತಿಲ್ಲ, ಮಿತಿ ಮೀರಿದ ದಿನಗಳನ್ನು ಬದುಕುತ್ತಿದ್ದೇನೆ, ಯಾರಿಗೂ ಕೆಡಕು ಮಾಡುವುದು ಬೇಡ, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡೋಣ, ನಮ್ಮವರೇ ನಮ್ಮವರ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.