ತುಮಕೂರು: ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ನಕಲಿ ಗಿಫ್ಟ್ ಕಾರ್ಡ್ ಕಾರಣ, ಮತದಾರರಿಗೆ ನಕಲಿ ಕಾರ್ಡ್ ಹಂಚಿ ಗೆಲುವು ಸಾಧಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಕ್ರಮದಿಂದ ಕಾಂಗ್ರಸ್ ಗೆಲುವು ಸಾಧಿಸಿರುವುದರ ವಿರುದ್ಧ ಹೈಕೋರ್ಟ್ ಗೆ ದೂರು ದಾಖಲಿಸಲಾಗುವುದು, ತುಮಕೂರು ಗ್ರಾಮಾಂತರದಲ್ಲಿ ನಕಲಿ ಬಾಂಡ್ ಹಂಚಿದ್ದವರನ್ನು ಅನರ್ಹತೆ ಮಾಡಿದ್ದಂತೆ ಕುಣಿಗಲ್ ನ ಶಾಸಕರು ಅನರ್ಹಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಿಫ್ಟ್ ಕಾರ್ಡ್ ನೀಡಿ ಹಣ ಬರುತ್ತೆ ಎಂದು ದಾರಿತಪ್ಪಿಸುವ ಮೂಲಕ ಮತ ಪಡೆದಿದ್ದಾರೆ, ಕುಣಿಗಲ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಹೈ ಕೋರ್ಟ್ ನಲ್ಲಿ ದೂರು ದಾಖಲಿಸಲು ನಿರ್ಧರಿಸಲಾಗಿದ್ದು, ಮತದಾರರೇ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಜನಾರ್ಶೀವಾದದಿಂದ ಅಧಿಕಾರಕ್ಕೆ ಬಂದಿಲ್ಲ, ಕುಣಿಗಲ್ ನಲ್ಲಿ ಅಕ್ರಮ ಮಾಡುವ ಮೂಲಕ ಪ್ರಜಾಪ್ರಭುತ್ವ, ಚುನಾವಣಾ ಆಯೋಗಕ್ಕೆ ವಿರುದ್ಧವಾಗಿ ಕಾನೂನು ಉಲ್ಲಂಘಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ, ಡಾ.ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ಕೈ, ಚುನಾವಣೆಗೆ ನಾಲ್ಕು ತಿಂಗಳ ಮುಂಚೆಯೇ ಕುಕ್ಕರ್ ಹಂಚಿದರು, ಈ ಬಗ್ಗೆ ಪ್ರಕರಣ ದಾಖಲಾಗಿದ್ದರು ಸಹ ಗಿಫ್ಟ್ ಕಾರ್ಡ್ ನೀಡಿ ಗೆಲುವು ಸಾಧಿಸಿದರು ಎಂದರು.
ತುಮಕೂರು ಗ್ರಾಮಾಂತರದಲ್ಲಿ ನಕಲಿ ಬಾಂಡ್ ನೀಡಿದ್ದ ಪ್ರಕರಣದಲ್ಲಿ ನ್ಯಾಯ ಸಿಕ್ಕಂತೆ ಕುಣಿಗಲ್ ನಲ್ಲಿ ನಡೆದಿರುವ ಅಕ್ರಮದಲ್ಲಿಯೂ ನ್ಯಾಯ ಸಿಗಲಿದೆ, ಕಾಂಗ್ರೆಸ್ ಈ ಗಿಫ್ಟ್ ರಾಜಕಾರಣ, ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ, ಕಾಂಗ್ರೆಸ್ ನ ಸುಳ್ಳಿನ ರಾಜಕಾರಣಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಕುಣಿಗಲ್ ನ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ ಮತದಾರರಿಗೆ ಹಂಚಿರುವ ನೂರಾರು ಗಿಫ್ಟ್ ಕಾರ್ಡ್ ಅನ್ನು ಸಂಗ್ರಹಿಸಲಾಗಿದೆ, ಮತದಾರರಿಗೆ ವಂಚಿಸಿರುವ ಬಗ್ಗೆ ದೂರು ದಾಖಲಿಸುವ ನಿಟ್ಟಿನಲ್ಲಿ ಮುಖಂಡರೊಂದಿಗೆ ಚರ್ಚಿಸಿ ಮತದಾರರಿಂದಲೇ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿದೆ ಎಂದರು.
ಐದರಿಂದ ಆರು ಮತದಾರರಿರುವ ಕುಟುಂಬಗಳಿಗೆ ಎರಡು ಗಿಫ್ಟ್ ಕಾರ್ಡ್ ನೀಡಲಾಗಿದೆ, ಕಾಂಗ್ರೆಸ್ ಗೆ ಮತ ಹಾಕಿದರೆ ಮಾತ್ರ ಹಣ ಬರಲಿದೆ ಎಂದು ಮತದಾರರಿಗೆ ಹೇಳಿದ್ದು, ಕಾಂಗ್ರೆಸ್ ಗೆ ಮತ ಹಾಕದೇ ಇದ್ದರೆ ಹಣ ಬರುವುದಿಲ್ಲ ಎಂದು ನಕಲಿ ಕಾರ್ಡ್ ನೀಡಿ ಯಾಮಾರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿಹೆಬ್ಬಾಕ, ಚಿದಾನಂದ್, ಬಲರಾಂ, ಯಶಸ್, ಬೈರಪ್ಪ, ಸದಾನಂದ, ಜಗದೀಶ್ ಸೇರಿದಂತೆ ಇತರರಿದ್ದರು.