ಕುಣಿಗಲ್ ಬಳಿ ಎನ್ ಎಸ್ ಜಿ ಕಮಾಂಡೋ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ಕಮಾಂಡೋಗೆ ಸಂಬಂಧಿಸಿದ ವಸ್ತುಗಳನ್ನು ಪೋಷಕರಿಗೆ ಕೊಡುವುದರಲ್ಲಿ ಕುಣಿಗಲ್ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ತಣಿಗೆಬೈಲು ನಿವಾಸಿ ದೀಪಕ್, ಎನ್ ಎಸ್ ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೊ ಆಗಿದ್ದು, ರಜೆ ಮುಗಿಸಿಕೊಂಡು ಡ್ಯೂಟಿಗೆ ಹೋಗಬೇಕಾದರೆ ಕುಣಿಗಲ್ ಬಳಿಯ ಹೇಮಾವತಿ ಕ್ರಾಸ್ ನಲ್ಲಿ ಅಪಘಾತವಾಗಿ ಸಾವನ್ನಪ್ಪಿದ್ದ.
ದೀಪಕ್ ಅಂತ್ಯ ಸಂಸ್ಕಾರ ಮುಗಿದ ಮೇಲೆ ಅಪಘಾತದಲ್ಲಿ ಆತ ಸಾವನ್ನಪ್ಪಿದ ಎನ್ನುವುದು ನಿಜವಾದರೂ ಅಪಘಾತ ಮಾಡಿದ ವಾಹನ ಯಾವುದು ಎಂಬುದು ನಿಗೂಢವಾಗಿದೆ, ಮೃತ ದೀಪಕ್ ಗೆ ಸಂಬಂಧಿಸಿದ ಹೆಲ್ಮೆಟ್, ವಾಚ್ ಹಾಗೂ ಮೊಬೈಲ್ ಅನ್ನು ಸಹ ಕುಣಿಗಲ್ ಪೊಲೀಸರು ನೀಡುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ.
ಅಪಘಾತವಾದ ನಂತರ ಲಾರಿ ಚಾಲಕನೇ ಆಸ್ಪತ್ರೆಗೆ ಬರುವಂತೆ ದೀಪಕ್ ಫೋನ್ ನಿಂದ ಕರೆ ಮಾಡಿದ್ದ, ನಂತರ ನೆಲಮಂಗಲದಲ್ಲಿ ಇದ್ದೇನೆ ಬಂದು ಫೋನ್ ತೆಗೆದುಕೊಂಡು ಹೋಗಿ ಎಂದು ಪೋಷಕರಿಗೆ ತಿಳಿಸಿದ್ದಾನೆ.
ಆದರೆ ಕುಣಿಗಲ್ ಪೊಲೀಸರು ಮಾತ್ರ ಅಪಘಾತದಲ್ಲಿ ದಿನಾ ಸಾಯ್ತಾರೆ ನಾವೇನ್ ಮಾಡೋಕೆ ಆಗುತ್ತೆ ಹೋಗ್ರಿ ಎಂದು ಪೋಷಕರಿಗೆ ಹೇಳಿದ್ದಾರೆ, ಮೊಬೈಲ್ ನಲ್ಲಿ ಎನ್ ಎಸ್ ಜಿ ಗೆ ಸಂಬಂಧಿಸಿದ ಅನೇಕ ವಿಚಾರಗಳಿದ್ದು, ಪೊಲೀಸರು ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.