ವಿವಾದಕ್ಕೆ ಕಾರಣವಾದ ತಿಪಟೂರು ಪೊಲೀಸರ ನಡೆ
ತಿಪಟೂರು: ಇತ್ತಿಚೆಗಷ್ಟೇ ಪೊಲೀಸ್ ಠಾಣೆಯನ್ನು ಕೇಸರೀಕರಣ ಮಾಡದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ತಿಪಟೂರು ನಗರ ಠಾಣೆಯಲ್ಲಿ ಪೊಲೀಸರು ಗ್ರಾಮದೇವತೆಯ ವಿಗ್ರಹವನ್ನು ಹೊತ್ತು ಮೆರವಣಿಗೆ ಮಾಡಿಸಿ, ಠಾಣೆಯೊಳಗೆ ಕೂರಿಸಿ ಜಾತ್ರೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ತಿಪಟೂರು ಕೆಂಪಮ್ಮ ದೇವಿ ಕೊಲ್ಲಾಪುರದಮ್ಮ ದೇವಿ.ಮಾರನಗೆರೆ ಶ್ರೀ ಕೆಂಪಮ್ಮ ದೇವಿ.ಶ್ರೀಚಿಕ್ಕಮ್ಮ ದೇವಿ ಹಾಗೂ ಶ್ರೀಧೂತರಾಯ ಸ್ವಾಮಿಯವರನ್ನ ಉತ್ಸವ ಮೂರ್ತಿಗಳನ್ನು ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಶೇಷ ಪೂಜೆ ಆರತಿಯನ್ನು ಸಿಬ್ಬಂದಿಗಳು ಮಾಡಿದ್ದಾರೆ.
ಕೆಂಪಮ್ಮದೇವಿ ಜಾತ್ರೆ ಅಂಗವಾಗಿ ಸಮವಸ್ತ್ರ ವನ್ನು ಕಳಚಿಟ್ಟ ಪೊಲೀಸ್ ಸಿಬ್ಬಂದಿ, ಸಾಂಪ್ರದಾಯಿಕ ಬಿಳಿಪಂಚೆ ಷರ್ಟ್ ಧರಿಸಿ ಅರಳಿಕಟ್ಟೆಯಿಂದ ದೇವರ ಮೂರ್ತಿಗಳನ್ನು ಹೊತ್ತು ಠಾಣೆಗೆ ಕರೆದೊಯ್ದಿದ್ದಾರೆ,
ಶ್ರೀಕೆಂಪಮ್ಮ ದೇವಿ .ಶ್ರೀಕೊಲ್ಲಾಪುರದಮ್ಮ ದೇವಿ.ಶ್ರೀ ಮಾರನಗೆರೆ ಶ್ರೀಕೆಂಪಮ್ಮದೇವಿ ಚಿಕ್ಕಮ್ಮ ದೇವಿಯವರಿಗೆ ಆರತಿ ಎಡೆ.ಹಾಗೂ ಹೂವು ಹಣ್ಣು ಅರ್ಪಿಸಿ ಅದ್ದೂರಿಯಾಗಿ ಪೂಜೆ ನೆರವೇರಿಸಲಾಗಿದೆ.
ಠಾಣೆಯಲ್ಲಿಯೇ ಶ್ರೀಚಿಕ್ಕಮ್ಮ ದೇವಿಯವರ ಕುಣಿತ ನೆರವೇರಿಸಲಾಗಿದ್ದು, ತಿಪಟೂರು ನಗರಠಾಣೆ ವೃತ್ತ ನಿರೀಕ್ಷಕರಾದ ಮಾರ್ಕಂಡೇಯ ಸಬ್ ಇನ್‌ಸ್ಪೆಕ್ಟರ್ ಶಿವಣ್ಣ ಎಎಸ್‌ಐ ಗಳಾದ ನಿಸಾರ್.ರಾಮಣ್ಣ ಸೇರಿದಂತೆ ಸಿಬ್ಬಂದಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಜಾತ್ಯಾತೀತ ಮತ್ತು ಧರ್ಮಾತೀತವಾಗಿರಬೇಕಾದ ಪೊಲೀಸ್ ಠಾಣೆಯಲ್ಲಿ ದೇವರ ಮೂರ್ತಿಗಳನ್ನು ಕೂರಿಸಿ ಅದ್ದೂರಿಯಾಗಿ ಪೂಜೆ ನಡೆಸುವ ಮೂಲಕ ಧರ್ಮ ನಿರಾಪೇಕ್ಷತೆಯನ್ನು ತೋರಬೇಕಾದ ಅಧಿಕಾರಿಗಳು,ಸಿಬ್ಬಂದಿಗಳು ಧರ್ಮಕ್ಕೆ ಸೀಮಿತವಾಗಿ ಧರ್ಮಾಚರಣೆಯಲ್ಲಿ ತೊಡಗಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.