ತುಮಕೂರು: ಬಾತ್ ರೂಂ ತುಂಬ ಮನುಷ್ಯನ ರಕ್ತ,ಯಾವ ದೇಹವೂ ಇಲ್ಲ, ಏನಾಯ್ತು ಎಂಬ ವಿಚಾರವೇ ಗೊತ್ತಿಲ್ಲದೇ , ಸಾರ್ವಜನಿಕರು ಕಂಗಾಲಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಹೋದ ಪೊಲೀಸರು ಆಗಬಾರದು ಆಗಿ ಹೋಗಿದೆ ಅಂದುಕೊಂಡರೆ ಕೊನೆಗೆ ಆಗಿದ್ದೇ ಬೇರೆಯೇ ಆಗಿದೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುಮ್ಮಂಜಿಪಾಳ್ಯದ ಅಡಿಕೆ ತಟ್ಟೆ ಕಾರ್ಖಾನೆಯ ವಸತಿ ಗೃಹದ ಬಾತ್ ರೂಂನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಏನಾಗಿದೆ ಎಂಬ ಗೊಂದಲ ಮೂಡಿದೆ, ರಕ್ತ ಇರುವುದನ್ನು ನೋಡಿ ಕೊಲೆ ಆಗಿದೆಯಾ ಎಂಬ ಅನುಮಾನ ಮೂಡಿದೆ.
ಕೊಲೆ ಆದವರು ಯಾರು? ಮಾಡಿದವರು ಯಾರು? ಮೃತ ದೇಹ ಏನಾಯ್ತು ಎಂದು ತನಿಖೆಗೆ ಇಳಿದಿದ್ದ ಪೊಲೀಸರು ಕೊನೆಗೆ ಶಾಕ್ ಗೆ ಒಳಗಾಗಿದ್ದಾರೆ, ಅಲ್ಲಿ ನಡೆದ ಘಟನೆಯನ್ನು ಕೇಳಿ ತಬ್ಬಿಬ್ಬಾಗಿರುವುದಲ್ಲದೇ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ: ಬಿಹಾರ ಮೂಲದ ದಂಪತಿಯನ್ನು ಅಡಿಕೆ ತಟ್ಟೆ ಕಾರ್ಖಾನೆಯಲ್ಲಿ ಮೇ.22ರಂದು ಕುಮ್ಮಂಜಿಪಾಳ್ಯಕ್ಕೆ ಕರೆದುಕೊಂಡು ಬರಲಾಗಿದ್ದು, ಅಂದು ರಾತ್ರಿಯೇ ಬಾತ್ ರೂಂನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬಿಹಾರ ಮೂಲದ ವ್ಯಕ್ತಿ ಬ್ಲೇಡಿನಿಂದ ಕತ್ತು ಕೂಯ್ದುಕೊಂಡಿದ್ದಾನೆ.
ಕತ್ತು ಕೊಯ್ದುಕೊಂಡಿದ್ದರಿಂದ ಬಾತ್ ರೂಂ ರಕ್ತ ಸೋರಿ ಹೆಪ್ಪುಗಟ್ಟಿದ್ದು, ಅಲ್ಲಿಂದ ನಡೆದುಕೊಂಡೇ ಮರಳೂರಿನವರೆಗೆ ಸುಮಾರು 5 ಕಿಲೋ ಮೀಟರ್ ನಡೆದುಕೊಂಡೇ ಬಂದಿರುವ ಭೂಪ, ಅಲ್ಲಿಯೇ ಒಂದು ರಾತ್ರಿ ಒಂದು ಹಗಲು ಕಳೆದಿದ್ದಾನೆ.
ಇತ್ತ ಸಾರ್ವಜನಿಕರು ಆತಂಕಕ್ಕೆ ಒಳಗಾದರೆ ಅತ್ತ ಪೊಲೀಸರು ಏನಾಗಿದೆಯೋ ಅಂತ ಕಂಗಾಲಾಗಿದ್ದರೆ, ರಕ್ತಸ್ರಾವಕ್ಕೆ ಒಳಗಾಗಿದ್ದ ವ್ಯಕ್ತಿ ಒಂದು ದಿನ ಪೂರ್ತಿ ನೀರು ಕುಡಿಯದೇ ಮಲಗಿದ್ದಾನೆ, ಎರಡು ಲೀಟರ್ ರಕ್ತಸ್ರಾವವಾಗಿದ್ದ ಆತನನ್ನು ಪೊಲೀಸರು ಬುಧವಾರ ರಾತ್ರಿ ಎಸ್ಎಸ್ಐಟಿ ಕಾಲೇಜಿನ ಬಳಿ ಪತ್ತೆ ಹಚ್ಚಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಆತ್ಮಹತ್ಯೆ ಯತ್ನಕ್ಕೆ ದೇವರೇ ಕಾರಣವಂತೆ!
ಬಿಹಾರ ಮೂಲದ ವ್ಯಕ್ತಿ ಆತಹತ್ಯೆ ಮಾಡಿಕೊಳ್ಳಲು ದೇವರೇ ಕಾರಣವಂತೆ ಈ ಹಿಂದೆ ನೇಪಾಳದಲ್ಲಿಯೂ ಹೀಗೆ ಆಗಿತ್ತು ಎಂದು ಆತನ ಮಡದಿ ಪೊಲೀಸರಿಗೆ ತಿಳಿಸಿದ್ದಾಳೆ, ಕತ್ತುಕೊಯ್ದುಕೊಂಡ ವ್ಯಕ್ತಿಗೆ ಆಗಾಗ ದೇವರು ಮೈಮೇಲೆ ಬರುತ್ತದಂತೆ ಆಗ ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನಿಸುತ್ತದೆ ಅಂತೆ, ಹೀಗೆ ದೇವರು ಬಂದಾಗ ಆತ್ಮಹತ್ಯೆ ಮಾಡಿಕೊಳ್ಳಲು ಬಾತ್ ರೂಂನಲ್ಲಿ ಕತ್ತುಕೊಯ್ದುಕೊಂಡ ಆತ, 5 ಕಿಲೋ ಮೀಟರ್ ನಡೆದುಕೊಂಡೇ ಬರುವ ಮೂಲಕ ಸಾರ್ವಜನಿಕರು ಹಾಗೂ ಪೊಲೀಸರಿಗೆ ಭೀತಿ ಮೂಡಿಸಿದ್ದಾನೆ.