ಹಾಸನದಲ್ಲಿ ಪತ್ತೆಯಾದ ಚಿಕ್ಕಬಾಣಗೆರೆಯ ಮಕ್ಕಳು

ತುಮಕೂರು: ಒಂದೇ ಗ್ರಾಮದಿಂದ   ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಹಾಸನದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ಕಣ್ಮರೆಯಾಗಿದ್ದು, ಒಂದೇ ಗ್ರಾಮದ ನಾಲ್ವರು ಮಕ್ಕಳು ಕಣ್ಮರೆಯಾಗಿದ್ದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು.

ಶನಿವಾರ ಮಧ್ಯಾಹ್ನ ಆಟ ಆಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿಲ್ಲ. ಎಷ್ಟೋತ್ತಾದರೂ ಮಕ್ಕಳು ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದ್ರೆ ಏನು ಪ್ರಯೋಜನವಾಗಿಲ್ಲ. ಊರೆಲ್ಲಾ ಹುಡುಕಿದರೂ ಮಕ್ಕಳು ಸಿಗದ ಕಾರಣ ಪೋಷಕರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಾಪತ್ತೆಯಾಗಿದ್ದ ಎಲ್ಲರೂ 15 ವರ್ಷದ ವಯಸ್ಸಿನವರಾಗಿದ್ದಾರೆ. ಒಂದೇ ಗ್ರಾಮದ, ಒಂದೇ ವಯಸ್ಸಿನ 4 ಮಕ್ಕಳು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಇಳಿದಿದ್ದರು.

ಶಿರಾ ಶಾಸಕ ಟಿ ಬಿ ಜಯಚಂದ್ರ ಅವರು ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮಕ್ಕಳ ಚಿತ್ರಗಳನ್ನು ಫೋಸ್ಟ್ ಮಾಡಿ, ಘಟನೆ ಸಂಬಂಧ ನಾನು ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಾರ್ವಜನಿಕರ ಸಹಕಾರ ಕೂಡ ನಿರೀಕ್ಷಿತ ಎಂದು ಮನವಿ ಮಾಡಿದ್ದರು.

ಹಾಸನದ ಹೊಸ ಬಸ್ ನಿಲ್ದಾಣದಲ್ಲಿ  ನಾಲ್ವರು ಮಕ್ಕಳು ಇದ್ದಿದ್ದನ್ನು ಪ್ರಶ್ನಿಸಿದಾಗ ಸಿರಾ ಮೂಲದವರು ಎಂದು ತಿಳಿದು ಬಂದಿದ್ದು, ಬೆಂಗಳೂರಿನಿಂದ ಹಾಸನಕ್ಕೆ ಬಂದಿರುವುದಾಗಿ ಹೇಳಿದ್ದು, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Verified by MonsterInsights