ತುಮಕೂರು: ಟೈಲ್ಸ್ ಅಂಗಡಿ ಮಾಲೀಕನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿನ ಯಲ್ಲಾಪುರದಲ್ಲಿ ನಡೆದಿದೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಯಲ್ಲಾಪುರದ ಗೋಕುಲ ರೈಸ್ ಮಿಲ್ ಪಕ್ಕದಲ್ಲಿ ಹೊಸದಾಗಿ ಅಂಗಡಿ ಬಾಡಿಗೆ ಪಡೆದು ಟೈಲ್ಸ್ ಅಂಗಡಿ ಮಾಡಲು ರಿನೋವೇಷನ್ ಮಾಡುತ್ತಿದ್ದ ಮಾಲೀಕ ಚಿಕ್ಕಮಗಳೂರು ಮೂಲದ ಝಾಕೀರ್ ಮೇಲೆ ಸ್ಪೈಂಡರ್ ಬೈಕ್ ನಲ್ಲಿ ಬಂದ ಆಗುಂತಕರು ಮಚ್ಚಿನಿಂದ ಭೀಕರವಾಗಿ ತಲೆಯ ಭಾಗದಲ್ಲಿ ಕೊಚ್ಚಿ ಪರಾರಿಯಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ಮೂಲದ ಝಾಕೀರ್ ಏಳು ತಿಂಗಳ ಹಿಂದೆ ತುಮಕೂರಿಗೆ ಬಂದಿದ್ದು, ಇತ್ತಿಚೆಗೆ ಯಲ್ಲಾಪುರದಲ್ಲಿ ಟೈಲ್ಸ್ ಅಂಗಡಿ ತೆರೆಯಲು ಮುಂದಾಗಿದ್ದ ಎನ್ನಲಾಗಿದ್ದು, ಅಂಗಡಿಯ ರಿನೋವೇಷನ್ ಮಾಡಿಸುತ್ತಿದ್ದ ಸಂದರ್ಭದಲ್ಲಿಯೇ ದಾಳಿ ಮಾಡಿ ಕೊಲೆ ಮಾಡಲಾಗಿದೆ.
ಮನೆಗೆ ಬಂದಿದ್ದರೆ ಬದುಕುತ್ತಿದ್ದ: ಏಳೆಂಟು ತಿಂಗಳ ಹಿಂದೆ ತುಮಕೂರಿಗೆ ಬಂದಿದ್ದ ಚಿಕ್ಕಮಗಳೂರಿನ ಗೋರಿ ಕಾಲೋನಿಯ ಝಾಕೀರ್ ವಾರಾಂತ್ಯದಲ್ಲಿ ತೆರಳಿ ಹೆಂಡತಿ ಮತ್ತು ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದ, ಟೈಲ್ಸ್ ಅಂಗಡಿ ಪ್ರಾರಂಭಿಸಿದ ನಂತರ ಮಕ್ಕಳಿಗೆ ಬೇಸಿಗೆ ರಜೆ ಪ್ರಾರಂಭವಾದ ನಂತರ ಹೆಂಡತಿ ಮಕ್ಕಳೊಂದಿಗೆ ಯಲ್ಲಾಪುರದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್, ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಸರ್ಕಲ್ ಇನ್ ಸ್ಪೆಕ್ಟರ್ ಗಳಾದ ಕುಮಾರ್, ಚೆನ್ನೇಗೌಡ, ಸಬ್ ಇನ್ ಸ್ಪೆಕ್ಟರ್ ಪ್ರಸನ್ನಕುಮಾರ್ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.