ಸಚಿವ ಸ್ಥಾನ ಪಡೆಯಲು ಐವರ ಪೈಪೋಟಿ

ತುಮಕೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಖಚಿತವಾದಂತೆ, ತುಮಕೂರು ಜಿಲ್ಲೆಯಿಂದ ಯಾರು ಮತ್ರಿಯಾಗಲಿದ್ದಾರೆ ಎಂಬ ಚರ್ಚೆಯೂ ಶುರುವಾಗಿದ್ದು, ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನ ಐವರು ಈಗ ಸಚಿವ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ.

ಡಾ.ಜಿ.ಪರಮೇಶ್ಚರ್: ಕೊರಟಗೆರೆ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಭರ್ಜರಿ ಜಯಭೇರಿ ಬಾರಿಸಿರುವ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಮುಖ ಹುದ್ದೆಯನ್ನು ಪಡೆಯುವುದು ಖಚಿತವಾಗಿದೆ,ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರೆನಿಸಿರುವ ಪರಮೇಶ್ವರ್ ಹೈಕಮಾಂಡ್ ಮಟ್ಟದಲ್ಲೂ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ.

ಜನಪರ ಪ್ರಣಾಳಿಕೆಯನ್ನು ನೀಡುವ ಮೂಲಕ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮಿಸಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಪ್ರಮುಖ ಖಾತೆಯೊಂದಿಗೆ ಡಿಸಿಎಂ ಹುದ್ದೆಯನ್ನು ನೀಡಲು ಹೈಕಮಾಂಡ್ ಚಿಂತಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಟಿ.ಬಿ.ಜಯಚಂದ್ರ: ಶಿರಾ ಕ್ಷೇತ್ರದಲ್ಲಿ ಗೆದ್ದಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಈ ಬಾರಿ ಸಚಿವರಾಗುವುದು ಖಚಿತ ಎನ್ನಲಾಗಿದೆ, ಜಿಲ್ಲೆಯಲ್ಲಿ ಪ್ರಭಾವಿ ಒಕ್ಕಲಿಗ ನಾಯಕರೆನಿಸಿರುವ ಜಯಚಂದ್ರ ಕಾಂಗ್ರೆಸ್ ಸರ್ಕಾರ ವಿದ್ದಾಗ ಸಚಿವರಾಗಿ ಹಲವು ಅಭಿವೃದ್ದಿ ಕೆಲಸ ಮಾಡಿದ್ದಾರೆ ಶಿರಾ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಿ ಆಧುನಿಕ ಭಗೀರಥ ಎಂಬ ಖ್ಯಾತಿಗೂ ಒಳಗಾಗಿದ್ದಾರೆ, ಈ ಬಾರಿ ಸಚಿವ ಸ್ಥಾನ ಸಿಗುವುದು ಖಚಿತ, ಸ್ಪೀಕರ್ ಹುದ್ದೆ ನನಗೆ ಇಷ್ಟ ಇಲ್ಲ ಎಂದು ಹೇಳುವ ಮೂಲಕ ಈ ಹಿಂದೆ ನಿರ್ವಹಿಸಿದ ನೀರಾವರಿ ಹಾಗೂ ಕಾನೂನು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಕೆ.ಎನ್.ರಾಜಣ್ಣ: ಮಧುಗಿರಿ ಕ್ಷೇತ್ರದಿಂದ ಜಯ ಗಳಿಸಿರುವ ಕೆ.ಎನ್.ರಾಜಣ್ಣ ಅವರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ, ಈಗಾಗಲೇ ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು, ಅವರ ಪರವೇ ನಾನು ವೋಟ್ ಮಾಡಿದ್ದೇನೆ ಎಂದು ಹೇಳಿಕೆ ನೀಡಿರುವ ರಾಜಣ್ಣ ಸಹಕಾರ ಸಚಿವರಾಗುವ ಉಮೇದಿನಲ್ಲಿದ್ದಾರೆ.

ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ರಾಜಣ್ಣ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಬಯಸಿದ್ದಾರೆ, ಈ ನಿಟ್ಟಿನಲ್ಲಿ ಸಹಕಾರ ಖಾತೆ ಸಿಕ್ಕರೆ ಅನುಕೂಲವಾಗಲಿದೆ ಎಂಬ ಮಾತುಗಳನ್ನು ಈ ಹಿಂದೆ ಹೇಳಿದ್ದರು, ಇದೀಗ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದ್ದು, ರಾಜಣ್ಣ ಸಹಕಾರ ಸಚಿವರಾಗುವುದು ನಿಶ್ಚಿತ ಎನ್ನಲಾಗಿದೆ.

ಎಸ್.ಆರ್.ಶ್ರೀನಿವಾಸ್: ಗುಬ್ಬಿ ಕ್ಷೇತ್ರದಿಂದ ಸತತ ಐದು ಬಾರಿ ಗೆದ್ದಿರುವ ಎಸ್.ಆರ್.ಶ್ರೀನಿವಾಸ್ ಕೂಡ ಸಚಿವ ಸ್ಥಾನ ಸಿಗಲಿದೆ ಎಂಬ ಆಸೆಯಲ್ಲಿದ್ದಾರೆ, ಜೆಡಿಎಸ್ ನಲ್ಲಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಶ್ರೀನಿವಾಸ್ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಸ್.ಆರ್.ಶ್ರೀನಿವಾಸ್ ಅವರು ಒಕ್ಕಲಿಗ ಸಮುದಾಯದ ಖೋಟಾ ಅಡಿ ಸಚಿವ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿದೆ.

ಕೆ.ಷಡಕ್ಷರಿ:  ತಿಪಟೂರು ಕ್ಷೇತ್ರದಿಂದ ಗೆದ್ದಿರುವ ಹಿರಿಯ ಕಾಂಗ್ರೆಸ್ ನಾಯಕ ಕೆ.ಷಡಕ್ಷರಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ, ಇದು ನನ್ನ ಕೊನೆ ಚುನಾವಣೆ ಎಂದಿರುವ ಷಡಕ್ಷರಿ ಅವರು ಲಿಂಗಾಯತ ಸಮುದಾಯದ ಮುಖಂಡರಾಗಿದ್ದು, ವೀರಶೈವ ಲಿಂಗಾಯತ ಖೋಟಾ ಅಡಿಯಡಿ ಸಚಿವರಾಗುವ ಸಾಧ್ಯತೆ ಇದೆ.

2013ರಲ್ಲಿಯೇ ಸಚಿವರಾಗುವ ಅವಕಾಶ ಇದ್ದಾಗಲೂ ಒತ್ತಡ ಹಾಕದ ಕೆ.ಷಡಕ್ಷರಿ ಅವರು ಕೊನೆ ಚುನಾವಣೆಯಲ್ಲಿ ಹಾಲಿ ಸಚಿವರಾಗಿದ್ದ ಬಿ.ಸಿ.ನಾಗೇಶ್ ಅವರನ್ನು ಮಣಿಸುವ ಮೂಲಕ ವಿಧಾನಸಭೆಯನ್ನು ಪ್ರವೇಶಿಸಿದ್ದು, ಹಳೇ ಮೈಸೂರು ಭಾಗದ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಾಗ ಕೆ.ಷಡಕ್ಷರಿ ಅವರ ಹೆಸರು ಅಂತಿಮಗೊಳ್ಳಲಿದೆ ಎಂಬ ಮಾತುಗಳು ಕೇಳಿಬಂದಿದೆ.

Verified by MonsterInsights