ತುಮಕೂರು: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಕ್ತಿ ಕೇಂದ್ರದ ಮುಂಭಾಗ ಜೆಡಿಎಸ್, ಬಿಜೆಪಿ ಕಾರ್ಯಕರ್ತ ಪರಸ್ಪರ ಘೋಷಣೆ ಕೂಗಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಹೆಬ್ಬೂರಿನಿಂದ ಪ್ರಾರಂಭಗೊಂಡ ಶಾಸಕ ಡಿ.ಸಿ.ಗೌರಿಶಂಕರ್ ಅವರ ಬೈಕ್ ರ್ಯಾಲಿ ಮತ್ತು ರೋಡ್ ಶೋ ಬಾಣಾವರ ಗೇಟ್ ಬಳಿ ಬಿಜೆಪಿ ಶಕ್ತಿ ಕೇಂದ್ರದ ಬಳಿ ಬಂದಾಗ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪರ ಘೋಷಣೆ ಕೂಗಿದರು.
ಜೆಡಿಎಸ್ ಕಾರ್ಯಕರ್ತರ ಘೋಷಣೆಯಿಂದ ಉದ್ರೇಕಗೊಂಡ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಘೋಷಣೆ ಕೂಗಿದರು, ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಪರಿಸ್ಥಿತಿ ಸುಧಾರಿಸಲು ಪೊಲೀಸರು ಪರದಾಡಿದರು.
ಒಂದೇ ಸಮಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಗಳು ಅನುಮತಿ ನೀಡಿದ್ದರಿಂದ ಎರಡು ಕಡೆಯ ಕಾರ್ಯಕರ್ತರು ಸೇರಿದ್ದರು, ಇದರಿಂದಾಗಿ ಪರ-ವಿರೋಧ ಘೋಷಣೆಗಳು ಹೆಚ್ಚಿದ್ದರಿಂದ ಕಾರ್ಯಕರ್ತರು ಉದ್ವೇಗಕ್ಕೆ ಒಳಗಾದರು.
ಪರಿಸ್ಥಿತಿ ತಿಳಿಗೊಳಿಗೊಂಡರು ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಕುಣಿಗಲ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು, ಬಾಣಾವರ ಗೇಟ್ ನಿಂದ ಗೂಳೂರುವರೆಗೂ ಸಂಚಾರ ದಟ್ಟಣೆ ಹೆಚ್ಚಿದ್ದು, ಪ್ರಯಾಣಿಕರು ಹಿಡಿಶಾಪ ಹಾಕಿದರು.