ತುಮಕೂರು: ನಗರದ ಪ್ರಜ್ಞಾವಂತ ಮತ್ತು ಸ್ವಾಭಿಮಾನಿ ಮತದಾರರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ನೀಡಿ ಆಶೀರ್ವದಿಸಲಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವರಾದ ಸೊಗಡು ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಹಲವೆಡೆ ಮತಯಾಚನೆ ಮಾಡುತ್ತಾ ಅರಳೇಪೇಟೆ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಪ್ರದೇಶ ವ್ಯಾಪ್ತಿಯಲ್ಲಿ ಸೊಗಡು ಶಿವಣ್ಣ ಬೆಂಬಲಿತ ಸ್ವಾಭಿಮಾನಿ ಕಾರ್ಯಕರ್ತರು ಸ್ಥಳೀಯವಾಗಿ ಮತಯಾಚನೆ ಮಾಡಿದ ಸಂಧರ್ಭದಲ್ಲಿ ನಗರದಲ್ಲಿ ಜನರಿಗೆ ಸಿಗಬೇಕಾದ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರಿ ಕಛೇರಿಗಳು ಲಂಚದ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಕಾನೂನು ಸುವ್ಯವಸ್ಥೆಗಳ ಬಗ್ಗೆ ಜನ ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ನಡೆದಿರುವ ಕಾಮಗಾರಿಗಳು ಬಹುತೇಕ ಕಳಪೆ ಮತ್ತು ಅವೈಜ್ಞಾನಿಕವಾಗಿದ್ದು ಇದರಿಂದ ನಾಗರೀಕರು ನಾನಾ ಕಷ್ಟಗಳಿಗೆ ಗುರಿಯಾಗಿದ್ದು ಹಿಡಿ ಶಾಪ ಹಾಕುತ್ತಿದ್ದಾರೆ. ಸಮಗ್ರ ಹಿತ ಚಿಂತನೆ ಇಲ್ಲದ ಹಾಲಿ ಶಾಸಕನ ಅಪ್ರಬುಧ್ಧ ಹಾಗೂ ಬೇಜವಾಬ್ದಾರಿ ಕಾರಣಗಳಿಂದ ನಗರದ ಎಲ್ಲೆಡೆ ಜನತೆ ಪರಿತಪಿಸುವಂತಾಗಿದೆ ಎಂದು ಸೊಗಡು ಶಿವಣ್ಣ ವಿವರಿಸಿದರು.
ನಗರ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸೊಗಡು ಶಿವಣ್ಣ, ಅವೈಜ್ಞಾನಿಕ ರಸ್ತೆ ಪಾದಚಾರಿ ಸಂಚಾರದ ರಸ್ತೆ ಮತ್ತು ಚರಂಡಿ ನಿರ್ಮಾಣ, ಯುಜಿಡಿ ಅಸರ್ಮಪಕ ನಿರ್ವಹಣೆ ಮತ್ತು ಯುಜಿಡಿ ಕಾಮಗಾರಿಗಳು ಮುಕ್ತಾಯವಾಗಿದ್ದರೂ ಮನೆಗಳಿಂದ ಯುಜಿಡಿಗೆ ಸಂಪರ್ಕ ನೀಡದಿರುವುದು, ಟ್ರೀಟ್ಮೆಂಟ್ ಪ್ಲಾಂಟ್ (ಎಸ್.ಟಿ.ಪಿ) ಪ್ರಾರಂಭವೇ ಮಾಡದಿರುವುದು, ರಸ್ತೆಗಳಲ್ಲಿನ ಗುಂಡಿ-ರೋಡ್ ಕಟಿಂಗ್ಗಳನ್ನು ಮುಚ್ಚದಿರುವುದು, ಯುಜಿಡಿ ಕೆಲಸದ ನಂತರ ರಸ್ತೆಗೆ ಡಾಂಬರೀಕರಣ ಮಾಡದಿರುವುದು, ಬಡವರಿಗೆ ಸೂಕ್ತ ಮನೆ ನಿರ್ಮಾಣ ಮಾಡದಿರುವುದು. ಪರಿಶಿಷ್ಟ ಜಾತಿ/ವರ್ಗ, ಅಂಗವಿಕಲರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಮಹಾನಗರ ಪಾಲಿಕೆ ನೀಡುವ ಸೌಲಭ್ಯ ದೊರೆಯದಿರುವುದು, ಹೇಮಾವತಿ ನೀರಿನ ಅಸರ್ಮಕ ವಿತರಣೆ, ಬುಗುಡನಹಳ್ಳಿ ಮತ್ತು ಪಿ.ಎನ್.ಪಾಳ್ಯದ ನೀರು ಸರಬರಾಜು ಕೇಂದ್ರದಲ್ಲಿನ ವಿದ್ಯುತ್ ಅಡೆತಡೆಗಳನ್ನು ಸರಿಪಡಿಸದಿರುವುದು, ಆರೋಗ್ಯ-ಸ್ವಚ್ಛತೆಯಿಲ್ಲದೆ ನಗರದಲ್ಲಿ ರೋಗ-ರುಜಿನಗಳು ಹೆಚ್ಚಾಗುತ್ತಿವೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆ ನಾಗರೀಕರು ದಿನನಿತ್ಯವೂ ಹಲವಾರು ದೂರುಗಳನ್ನು ನನ್ನ ಗಮನಕ್ಕೆ ತರುತ್ತಿದ್ದು, ಸಂಬಂಧಿಸಿದವರಿಗೆ ಸೂಕ್ತ ಮಾಹಿತಿಯನ್ನು ನೀಡಿ ಸರಿಪಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಸ್ವಾಭಿಮಾನಿ ತುಮಕೂರಿನ ಮತದಾರರು ಮತ ನೀಡಿ ಆಶೀರ್ವದಿಸಿದರೆ, ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಸಮಸ್ಯೆಗಳು ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಸೊಗಡು ಶಿವಣ್ಣ ವಾಗ್ದಾನ ಮಾಡಿದರು.
ಈ ಮತಯಾಚನೆಯ ಸಂಧರ್ಭದಲ್ಲಿ ವೀರಶೈವ ಸಮಾಜದ ನಿರ್ದೇಶಕ ನಾಗಭೂಷಣ ಆರಾಧ್ಯ, ಸ್ವಾಭಿಮಾನಿ ಕಾರ್ಯಕರ್ತರಾದ ಸಿದ್ದಲಿಂಗಸ್ವಾಮಿ(ಎಲೆಕ್ಟ್ರಿಕ್) ರಾಮಚಂದ್ರರಾವ್, ಸಂತೋಷ್, ಮಂಜುನಾಥ್, ಸುಧಾಕರ್, ಅರುಣ್ಕುಮಾರ್, ಮಾರ್ಕೇಟ್ ವಿನಯ್ ಮುಂತಾದವರು ಭಾಗವಹಿಸಿದ್ದರು.