ಕಾಂಗ್ರೆಸ್, ಜೆಡಿಎಸ್ ಹಣಾಹಣಿಯಲ್ಲಿ ಕಾಲ್ಚೆಂಡಿನ ಪೈಪೋಟಿ.!!!

ಶ್ರೀನಿವಾಸಲು.ಎ

ಪಾವಗಡ: ನೆರೆ ರಾಜ್ಯ ಆಂಧ್ರ ಪ್ರದೇಶದೊಂದಿಗೆ ಸಂಬಂಧಗಳನ್ನು ಹಂಚಿಕೊಂಡಿರುವ ಪಾವಗಡ ವಿಧಾನಸಭಾ ಕ್ಷೇತ್ರದ ರಾಜಕಾರಣದ ಬಗ್ಗೆ ನೆರೆಯ ಮಡಕಶಿರಾ, ಧರ್ಮಾವರ, ಅನಂತಪುರದಲ್ಲಿಯೂ ಚರ್ಚೆಯಲ್ಲಿದೆ.

ಒಂದು ಕಾಲದಲ್ಲಿ ರಾಜ್ಯ ಮತ್ತು ಆಂಧ್ರ ಪ್ರದೇಶದ ರಾಜಕಾರಣದಲ್ಲಿ ಹೆಸರು ಮಾಡಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪಾವಗಡದ ಕದನ ಕಣದಲ್ಲಿ ಉಳಿದಿದ್ದಾರೆ. ಜಿಲ್ಲೆಯಲ್ಲಿ ಕೆಆರ್ ಪಿಪಿ ಅಭ್ಯರ್ಥಿ ಕಣದಲ್ಲಿ ಇರುವುದು ಇದೊಂದೇ ಕ್ಷೇತ್ರ ಎನ್ನುವುದು ವಿಶೇಷ.

ನೆರೆಯ ರಾಯಲಸೀಮೆಯ ಪ್ರಭಾವಳಿಯಲ್ಲಿ ಸಮ್ಮೀಳಿತಗೊಂಡಿರುವ ಪಾವಗಡದ ರಾಜಕಾರಣದಲ್ಲಿ ಸಾಂಪ್ರದಾಯಿಕ ಎದುರಾಳಿಯಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್  ನೇರ ಹಣಾಹಣಿ ಕ್ಷೇತ್ರದಲ್ಲಿ ಕಾಣುತ್ತಿದ್ದು, ಕೆಆರ್ ಪಿಪಿ ಮತ್ತು ಬಿಜೆಪಿ ಮತಗಳಿಕೆಗೆ ಪೈಪೋಟಿ ನಡೆಸುತ್ತಿವೆ.

ಅದೃಷ್ಟ ಪರೀಕ್ಷೆ: ಎರಡನೇ ಬಾರಿ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿರುವ ಹೆಚ್.ವಿ.ವೆಂಕಟೇಶ್, ಮಾಗಿದ ರಾಜಕಾರಣಿ, ತಂದೆಯ ಚುನಾವಣೆಯ ಕೆಲಸಗಳನ್ನು ನಿರ್ವಹಿಸಿ ಅನುಭವ, ಈಗ ಇನ್ನಷ್ಟು ಗಟ್ಟಿಯಾಗಿಸಿದೆ. 2013ರಲ್ಲಿ ಇದ್ದ ಸಹೋದರರ ಸವಾಲ್ ಈ ಬಾರಿ ಇಲ್ಲವಾಗಿದ್ದು, ಪೆದ್ದಯ್ಯನ ಪ್ರತಿಷ್ಠೆ ಉಳಿಸಲು ಕುಟುಂಬದವರೆಲ್ಲ ಒಂದಾಗಿ ಹೋರಾಡುತ್ತಿದ್ದಾರೆ.

ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಿಸಿರುವ ಹೆಚ್.ವಿ.ವೆಂಕಟೇಶ್ ಈಗ ಬೆಳಿಗ್ಗೆಯಿಂದಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ಪಕ್ಷ ಗೆಲ್ಲಲ್ಲು ಬೇಕಿರುವ ಅಗತ್ಯ ತಯಾರಿ ಮಾಡಿ ಇಟ್ಟುಕೊಂಡಿದ್ದಾರೆ, ಪಕ್ಷದಲ್ಲಿದ್ದ ಅನೇಕರು ಪಕ್ಷ ತೊರೆದರು ಚುನಾವಣೆಯಲ್ಲಿ ಗೆಲ್ಲುವುದು ನಾನೇ ಎಂಬ ಹುಮ್ಮಸ್ಸಿನಲ್ಲಿದ್ದಾರೆ.

ಪಕ್ಷದ ಕಾರ್ಯಕರ್ತರೇ ಬಲ: ಮಾಜಿ ಶಾಸಕ ತಿಮ್ಮರಾಯಪ್ಪ 2013ರಲ್ಲಿ ಕೆಲವೇ ಮತಗಳ ಅಂತರದಲ್ಲಿ ಸೋಲನ್ನು ಕಂಡವರು, ಪೌರ ಕಾರ್ಮಿಕರಾಗಿದ್ದವರನ್ನು ಶಾಸಕರನ್ನಾಗಿ ಮಾಡಿದ ಪಕ್ಷ ಹಾಗೂ ಕಾರ್ಯಕರ್ತರೇ ಬಲ ಎನ್ನುವುದನ್ನು ತಿಮ್ಮರಾಯಪ್ಪ ಮರೆಯುವುದಿಲ್ಲ.

ಸೌಮ್ಯ ಸ್ವಭಾವವೇ ತಿಮ್ಮರಾಯಪ್ಪ ಅವರ ಜನಪ್ರಿಯತೆಗೆ ಕಾರಣ ಎನ್ನುವ ಜನರು ಕಾರ್ಯಕರ್ತರನ್ನು ಗೌರವದಿಂದ ಕಂಡು ಕಳುಹಿಸುವ, ಮಾತನಾಡಿಸುವ, ಕ್ಷೇತ್ರದಲ್ಲಿ ಜನರಿಗೆ ಸದಾ ಲಭ್ಯ ಇರುತ್ತಾರೆ ಎನ್ನುವುದೇ ಇವರಿಗೆ ಪ್ಲಸ್ ಪಾಯಿಂಟ್, ಜೆಡಿಎಸ್ ಅಸ್ತ್ರಗಳಲ್ಲಿ ಇದು ಒಂದಾಗಿದೆ, ಕಾರ್ಯಕರ್ತರೇ ಚುನಾವಣೆಯಲ್ಲಿ ಮುಂದಾಳುಗಳಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಮಾದಿಗ ಸಮುದಾಯದ ಬಲ ಜೆಡಿಎಸ್ ಗೆ ದೊರಕಿದಂತೆ ಕಾಣುತ್ತಿದೆ.

ಸೇವಕನ ಸ್ಪರ್ಧೆ: ಮೂಲತಃ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದ ನೇರಳಕುಂಟೆ ನಾಗೇಂದ್ರ ಮೂರು ವರ್ಷದ ಹಿಂದೆಯೇ ಕೆಲಸಕ್ಕೆ ರಾಜೀನಾಮೆ ನೀಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು, ಜಾತ್ಯಾತೀತ ಜನತಾದಳದ ಅಭ್ಯರ್ಥಿಯಾಗಲು ಕಸರತ್ತು ನಡೆಸಿ ಕೊನೆಗೆ ಗಾಲಿ ಜನಾರ್ದನ ರೆಡ್ಡಿಯವರ ಕೆಆರ್ ಪಿಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಮಾಡಿರುವ ಸೇವೆಯಿಂದಲೇ ಗುರುತಿಸಿಕೊಂಡಿರುವ ನಾಗೇಂದ್ರ ಅವರ ಸ್ಪರ್ಧೆ ಕಾಂಗ್ರೆಸ್ ಮತ್ತು ಜೆಡಿಎಸ್ ಮತ ಬುಟ್ಟಿ ಅಲುಗಾಡುವಂತೆ ಮಾಡಿದೆ, ಶಿಕ್ಷಕನ ಚುನಾವಣೆಯಲ್ಲಿ ಅನೇಕ ಶಿಷ್ಯರು ಹೆಗಲು ನೀಡಿದ್ದು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.  ಬದಲಾವಣೆ ಬಯಸುತ್ತಿರುವ ಜನರಿಗಾಗಿ ಸ್ಪರ್ಧೆಯಲ್ಲಿ ಉಳಿದಿದ್ದೇನೆ ಎನ್ನುವ ನೇರಳಕುಂಟೆ ನಾಗೇಂದ್ರ ಅವರು ಮಾದಿಗ ಸಮುದಾಯದ ಮತವನ್ನೇ ಗಟ್ಟಿಯಾಗಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

ವಕೀಲರ ಸ್ಪರ್ಧೆಗೆ ವೈದ್ಯರ ನೆರವು: ಬಿಜೆಪಿ ಅಭ್ಯರ್ಥಿಯಾಗಿರುವ ಕೃಷ್ಣಾನಾಯ್ಕ್  ಹೈಕೋರ್ಟ್ ವಕೀಲರು, ಪಾವಗಡ ತಾಲ್ಲೂಕಿನವರೇ ಆದರು ವೃತ್ತಿ ಬೆಂಗಳೂರಿನಲ್ಲಿದೆ. ಮೀಸಲಾತಿ ವರ್ಗೀಕರಣದಿಂದ ಅಸಮಾಧಾನಿತರಾಗಿದ್ದ ಬಂಜಾರ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಅವರ ಅಸಮಾಧಾನವನ್ನು ಹೋಗಲಾಡಿಸುವ, ಮತ ಕ್ರೋಢಿಕರಿಸುವುದು ಪಕ್ಷದ ನಿರ್ಧಾರವಾಗಿದೆ.

ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಡಾ.ಚಕ್ರಿರೆಡ್ಡಿ ಅವರು ಈಗ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಉಮೇದಿನೊಂದಿಗೆ ಪಕ್ಷ ಸೇರ್ಪಡೆಯಾಗಿದ್ದಾರೆ, ತಾಲ್ಲೂಕಿನ ಹೆಸರಾಂತ ವ್ಯದ್ಯರಾಗಿರುವ ಡಾ.ಚಕ್ರಿರೆಡ್ಡಿ ಅವರು ತಮ್ಮ ವಯಸ್ಸಿಗೆ ಮೀರಿದ ಉತ್ಸಾಹದೊಂದಿಗೆ ಪ್ರಚಾರ ಕಣದಲ್ಲಿ ಕೃಷ್ಣಾನಾಯ್ಕ್ ಪರ ಮತಯಾಚನೆ ಮಾಡುತ್ತಿದ್ದಾರೆ.

ಜಿದ್ದಾಜಿದ್ದಿನಿಂದ ಕೂಡಿರುವ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನೇರಾ ಹಣಾಹಣಿ ಇದ್ದು, ಕೆಆರ್ ಪಿಪಿ ಅಭ್ಯರ್ಥಿ ತೆಗೆದುಕೊಳ್ಳುವ ಮತಗಳ ಆಧಾರದ ಮೇಲೆಯೇ ಫಲಿತಾಂಶ ನಿರ್ಧಾರವಾಗುವ ಮಾತುಗಳು ಕೇಳಿಬಂದಿದ್ದರೂ ಸಹ ಫೋಟೋ ಫಿನಿಶ್ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ.

Verified by MonsterInsights