ತುಮಕೂರು: ಹೊರಗುತ್ತಿಗೆ ನೌಕರರಿಗೆ ನಿಯಮ ಬಾಹಿರವಾಗಿ ಮೀಸಲಾತಿ ಕಲ್ಪಿಸುವ ಮೂಲಕ ಅಕ್ರಮ ಎಸಗಿದ್ದ ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ನೇಮಕಾತಿ ಪ್ರಕ್ರಿಯೆಗೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ.
ರಾಜ್ಯದ ಯಾವುದೇ ಹಾಲು ಉತ್ಪಾದಕರ ಸಂಘಗಳಲ್ಲಿ ಇಲ್ಲದ ಹೊರಗುತ್ತಿಗೆ ನೌಕರರಿಗೆ ಮೀಸಲಾತಿಯನ್ನು ಕಲ್ಪಿಸುವ ಮೂಲಕ ನೇಮಕಾತಿ ಅಧಿಸೂಚನೆಯನ್ನು ತುಮುಲ್ ಹೊರಡಿಸಿತ್ತು, ತುಮುಲ್ ನೇಮಕಾತಿ ಅಧಿಸೂಚನೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಪ್ರಜಾಕಹಳೆ ಸರಣಿ ವರದಿಯನ್ನು ಪ್ರಕಟಿಸಿತ್ತು.
ತುಮುಲ್ ನೇಮಕಾತಿ ಪ್ರಕ್ರಿಯೆಯ ಆಗಿರುವ ಲೋಪದೋಷಗಳ ಬಗ್ಗೆ ಕೂಲಂಕಷವಾಗಿ ವರದಿಯೊಂದಿಗೆ ತುಮುಲ್ ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರ ಹೇಳಿಕೆಯನ್ನು ಪ್ರಕಟಿಸಿತ್ತು, ಸರಣಿ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಮಧುಗಿರಿ ತಾಲ್ಲೂಕಿನ ಅಭ್ಯರ್ಥಿಗಳು ಹೈ ಕೋರ್ಟ್ ಮೊರೆ ಹೋಗಿದ್ದು, ತುಮುಲ್ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಾಗಿ ತಯಾರಿ ನಡೆಸಿದ್ದ ಅನೇಕರಿಗೆ ತುಮುಲ್ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವೇ ಇರಲಿಲ್ಲ, ಪ್ರಜಾಕಹಳೆ ಪತ್ರಿಕೆ ವರದಿಯ ನಂತರ ಅನ್ಯಾಯದ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದ ಅಭ್ಯರ್ಥಿಗಳಿಗೆ ನ್ಯಾಯ ಸಿಕ್ಕಂತೆ ಆಗಿದೆ.
– ಕಿರಣ್, ನೊಂದ ಅಭ್ಯರ್ಥಿ
ಪ್ರಕರಣದ ರಿಟ್ ಪಿಟಿಷನ್ ಸಂಖ್ಯೆ 8230/2023ನಲ್ಲಿ ಸೆಕ್ಷನ್ 13(A) ಸಂವಿಧಾನ ಆರ್ಟಿಕಲ್ 226,227ರ ಅಡಿಯಲ್ಲಿ ಸಹಕಾರ ಇಲಾಖೆ ಕಾರ್ಯದರ್ಶಿ, ಜಂಟಿ ನಿರ್ದೇಶಕ ಸಹಕಾರ ಸಂಘಗಳ ನೋಂದಣಿ ಇಲಾಖೆ, ತುಮುಲ್ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತಿಪಾದಿಗಳನ್ನಾಗಿಸಿ ದಾವೆಯನ್ನು ಹೂಡಲಾಗಿತ್ತು.
ಪ್ರಜಾಕಹಳೆ ಪತ್ರಿಕೆ ಉಲ್ಲೇಖಿಸಿದ್ದ ಅಂಶಗಳನ್ನೇ ಎತ್ತಿ ಹಿಡಿದಿರುವ ಹೈಕೋರ್ಟ್ ಹೊರಗುತ್ತಿಗೆ ನೌಕರರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಅರ್ಹರಿಗೆ ಅನ್ಯಾಯವಾಗುತ್ತಿದೆ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ ಎಂಬ ಅಂಶಗಳನ್ನು ಪರಿಗಣಿಸಿ ತಡೆಯಾಜ್ಞೆ ನೀಡಿದೆ.
ವ್ಯವಸ್ಥಾಪಕ ನಿರ್ದೇಶಕರಿಗೆ ನೋಟೀಸ್: ನಿಯಮಬಾಹಿರವಾಗಿ ಹೊರಗುತ್ತಿಗೆ ನೌಕರರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಅಕ್ರಮ ಎಸಗಿಸುವ ಬಗ್ಗೆ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ, ಸಹಕಾರ ಸಂಘಗಳ ನೋಂದಣಿ ಇಲಾಖೆ ಜಂಟಿ ನಿರ್ದೇಶಕರು ನೋಟೀಸ್ ನೀಡಿದ್ದಾರೆ ಎನ್ನುವ ಪ್ರಾಥಮಿಕ ಮಾಹಿತಿ ಪ್ರಜಾಕಹಳೆ ಪತ್ರಿಕೆಗೆ ದೊರಕಿದೆ.
ಅಧಿಸೂಚನೆಗೆ ಮುನ್ನವೇ 78 ಹುದ್ದೆಗಳು ಫಿಕ್ಸ್ ಆಗಿದ್ದ ಬಗ್ಗೆ ಹಾಗೂ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿಯೂ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಅಕ್ರಮಗಳ ಮೂಲಕ ಅರ್ಹರಿಗೆ ಅವಕಾಶ ನಿರಾಕರಿಸಿದ್ದ ತುಮುಲ್ ಆಡಳಿತ ಮಂಡಳಿ ತರಾತುರಿಯಲ್ಲಿ ನೇಮಕಾತಿಯನ್ನು ಮಾಡಲು ಮುಂದಾಗಿದ್ದು ಏಕೆ ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ.