ಪಾವಗಡ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲವೆಂದು ಈ ಬಾರಿ ಕಾಂಗ್ರೆಸ್ ಪಕ್ಷ ಬಾರಿ ಬಹುಮತದಿಂದ ಸರ್ಕಾರ ರಚನೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಜನಗಳಿಗೆ ಅನುಕೂಲವಾದ ಯೋಜನೆಗಳನ್ನು ರೂಪಿಸಿ ಗ್ಯಾರೆಂಟಿ ಕಾರ್ಡ್ ಗಳ ಮೂಲಕ ತಿಳಿಸಲಾಗಿದೆ ಎಂದರು.
ಈ ಹಿಂದೆ ತಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ವಿದ್ಯಾಸಿರಿ ಶಾದಿ ಭಾಗ್ಯ ಪಶುಭಾಗ್ಯ ಅನ್ನಭಾಗ್ಯ ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ ಯಶಸ್ವಿನಿ, ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಅಕ್ರಮವಾಗಿ ಶಾಸಕರನ್ನು ಕೊಳ್ಳುವುದರ ಮೂಲಕ ಆಪರೇಷನ್ ಕಮಲದ ಮೂಲಕ ಅನೈತಿಕ ಸರ್ಕಾರ ರಚಿಸಿ ಎಲ್ಲ ಯೋಜನೆಗಳನ್ನು ಮೂಲಗುಂಪು ಮಾಡಿದ್ದಾರೆ ಎಂದರು.
ಹೋಟೆಲ್ ನಲ್ಲಿ ತಿಂಡಿಗಳ ಮೆನುವಿನ ರೀತಿ ಬಿಜೆಪಿ ಸರ್ಕಾರದಲ್ಲಿ ನೇಮಕಾತಿ, ಮಂಜೂರಾತಿ. ವರ್ಗಾವಣೆ ಗೆ ಇಂತಿಷ್ಟು ಹಣವೆಂದು ಬಿಜೆಪಿ ಸರ್ಕಾರ ನಿಗದಿಪಡಿಸಿದೆ ಎಂದರು.
ಜೆಡಿಎಸ್ ನವರು ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್ ನವರು ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಬಾರದೆಂದು, ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಹೋಮಗಳನ್ನು ಮಾಡಿಸುತ್ತಿದ್ದಾರೆ, ಜೆಡಿಎಸ್ ನವರು ಸ್ವತಂತ್ರವಾಗಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ ಎಂದು. ಜೆಡಿಎಸ್ ಪಕ್ಷಕ್ಕೆ ಈ ಬಾರಿ 25 ಸೀಟುಗಳು ಮಾತ್ರ ಬರಬಹುದು ಎಂದರು.
ಪ್ರಧಾನಿ ಮೋದಿ ಮಾತನಾಡಿದರೆ ಸಾಕು ಅಚ್ಚೆ ದಿನ್ ಎನ್ನುತ್ತಾರೆ ನಿಜವಾಗಲೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾರಿಗೆ ಆಚೆ ದಿನ್ ನೀವೇ ಹೇಳಿ, ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ನ ಕೊಡುಗೆ ಶೂನ್ಯ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರಿಗೆ ಸ್ಪಷ್ಟ ಬಹುಮತ ದೊಂದಿಗೆ ಗೆಲ್ಲಿಸುವಂತೆ ಮನವಿ ಮಾಡಿದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಳಾದ ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ತುಂಗಭದ್ರ ಯೋಜನೆಗಳು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅನುಷ್ಠಾನಗೊಂಡ ಯೋಜನೆಗಳಾಗಿವೆ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಎಪಿಸಿಸಿ ಅಧ್ಯಕ್ಷ ರಘುವೀರ ರೆಡ್ಡಿ ಮಾತನಾಡಿ ತಾಲೂಕಿನ ಅಭಿವೃದ್ಧಿಗೆ ಮತ್ತೊಂದು ಹೆಸರೇ ಶಾಸಕ ವೆಂಕಟರಮಣಪ್ಪ ಎಂದರು. ಇವರ ಕಾಲಾವಧಿಯಲ್ಲಿ ಮಾಡಿದಷ್ಟು ಅಭಿವೃದ್ಧಿ ಯಾವುದೇ ಶಾಸಕರ ಅವಧಿಯಲ್ಲಿ ನಡೆದಿಲ್ಲ ಸುಭದ್ರ ಸರ್ಕಾರ ರಚಿಸುವ ಶಕ್ತಿ ಕಾಂಗ್ರೆಸ್ ಗೆ ಮಾತ್ರವಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ ವಿ ಕುಮಾರಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಗೌಡ, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸುದೇಶ್ ಬಾಬು, ಗ್ರಾಮೀಣ ಘಟಕದ ಅಧ್ಯಕ್ಷ ರಾಮಾಂಜಿನಪ್ಪ, ರವಿ ಶಂಕರ ರೆಡ್ಡಿ, ಮೈಲಾರಪ್ಪ, ಮಾನಂ ವೆಂಕಟಸ್ವಾಮಿ, ಆಂಧ್ರಪ್ರದೇಶದ ಮಾಜಿ ಶಾಸಕ ಸುಧಾಕರ್, ಉಮೇಶ್ ಮಂಜುನಾಥ್ ಪ್ರಮೋದ್ ಕುಮಾರ್. ಎಂ ಎಸ್, ವಿಶ್ವನಾಥ್, ಮುಂತಾದ ಮುಖಂಡರು ಹಾಜರಿದ್ದರು.