ಇಂದಿರಾ ಗಾಂಧಿ ಅವರು ಅರಸು ಬಳಿಕ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಲು ಬಯಸಿದ್ದರು ಎಂಬ ಗೌಪ್ಯ ಮಾಹಿತಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುರಿತ ನೇಗಿಲಗೆರೆಗಳು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಬಿ.ಎನ್.ಚಂದ್ರಶೇಖರಯ್ಯ ತಿಳಿಸಿದರು.
6 ದಶಕಗಳ ರಾಜಕೀಯ ಜೀವನದಲ್ಲಿ ದೇವೇಗೌಡರು ಶಾಸಕರಾಗಿ, ಸಚಿವರಾಗಿ, ವಿಪಕ್ಷ ನಾಯಕರಾಗಿ ಮುಖ್ಯಮಂತ್ರಿಯಾಗಿ ಪ್ರಧಾನಮಂತ್ರಿಯವರೆಗಿನ ಉನ್ನತಸ್ಥಾನಕ್ಕೇರಿದ್ದರೂ ಅಧಿಕಾರ ಸ್ಥಾನದಲ್ಲಿದ್ದುದು ಕೇವಲ ಹತ್ತು ವರ್ಷಗಳು ಮಾತ್ರ. ಈ ಹತ್ತುವರ್ಷದಲ್ಲಿ ಪ್ರತೀ ದಿನ, ಪ್ರತಿಕ್ಷಣವನ್ನು ವ್ಯರ್ಥ ಮಾಡದೆ ರೈತಪರ, ನೀರಾವರಿ ಯೋಜನೆಗಳ ಜಾರಿಗೆ ಹೆಚ್ಚಿನ ಒತ್ತುಕೊಟ್ಟಿದ್ದು ದೇವೇಗೌಡರ ಹೆ್ಗ್ಗಳಿಕೆ ಎಂದರು.
ಪಾರದರ್ಶಕ ಮಾಧ್ಯಮ ಸಂಸ್ಥೆ ಹಾಗೂ ಜಿಲ್ಲಾ ಕಸಾಪ ಆಶ್ರಯದಲ್ಲಿ ತುಮಕೂರಿನ ಕನ್ನಡ ಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬದುಕು -ಬರಹ ಕುರಿತ ‘ನೇಗಿಲಗೆರೆಗಳು’ ಪುಸ್ತಕ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಧಾನಿಯಾಗಿದ್ದಲೂ ವೈಯಕ್ತಿಕ ಭದ್ರತೆಗೆ ಒತ್ತುಕೊಡದೆ ಸೌತ್ ಬ್ಲಾಕ್ ಕಚೇರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಬುಲೆಟ್ ಫ್ರೂಪ್ ಭದ್ರತೆಯಿಲ್ಲದೆ ಕಾಶ್ಮೀರಕ್ಕೆ ಭೇಟಿ ಕೊಟ್ಟು ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಮರುಸ್ಥಾಪಿಸಿದ್ದ ಏಕೈಕ ಪ್ರಧಾನಿ ದೇವೇಗೌಡ ಅವರು ಮಾತ್ರ ಎನ್ನುವ ಹೆಗ್ಗಳಿಕೆ ಇದೆ ಎಂದು ಉಲ್ಲೇಖಿಸಿದರು.
1960ರ ದಶಕದಿಂದಲೂ ರಾಜ್ಯ ಹಾಗೂ ರಾಷ್ಟç ರಾಜಕಾರಣದಲ್ಲಿ ಸಕ್ರಿಯರಾಗಿರುವ ರೈತರ ಮಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೃಷ್ಣ, ಕಾವೇರಿ ಯೋಜನೆಗಳ ಜಾರಿ ವಿಚಾರದಲ್ಲಿ ಅವರ ಹೋರಾಟ, ಸಡಿಲಸದ ಪಟ್ಟುಗಳು ಅವಿಸ್ಮರಣೀಯ. ಆದರೆ ಗೌಡರ ಸಾರ್ವಜನಿಕ ಕಾರ್ಯಗಳ ಸ್ಮರಣೆಗಿಂತ ಟೀಕೆಗಳನ್ನು ಹೆಚ್ಚಾಗಿ ಎದುರಿಸಿದ್ದು ದುರಂತ ಎಂದರು.
ಮೂಲ ಕೃತಿಕಾರರಾದ ಸುಗತ ಶ್ರೀನಿವಾಸರಾಜು ಸಂವಾದದಲ್ಲಿ ಪಾಲ್ಗೊಂಡು ನಾನು ಈ ಕೃತಿ ಬರೆಯಲು ಕೈಗೆತ್ತುಕೊಂಡಾಗ ದೇವೇಗೌಡರ ಬಗ್ಗೆ ಇದ್ದ ಭಾವನೆಗಳೇ ಬದಲಾದವು. ಗೌಡರ ರಾಜಕೀಯದಹೊರತಾಗಿ ಅವರೊಳಗಿರುವ ಅದ್ಭುತ ಜ್ಞಾನ, ಸ್ಮರಣಾ ಶಕ್ತಿ, ಓದಿನ ಆಸಕ್ತಿ, ಶಾಸನಸಭೆ , ಪಾರ್ಲಿಮೆಂಟ್ನ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದ ಪರಿ, ರೈತರ ಪರವಾಗಿ, ನೀರಾವರಿ ಯೋಜನೆ ಜಾರಿ ವಿಷಯವಾಗಿ ಅಧಿಕಾರ ತ್ಯಾಗ ಮಾಡುತ್ತಿದ್ದ ಅವರ ಬದ್ದತೆ ಎಲ್ಲವು ತಿಳಿಯಿತು. ಅವರಲ್ಲಿ ಅಧಿಕಾರದ ಹಪಹಪಿಯಿರಲಿಲ್ಲ ಎಂದರು.
ಪತ್ರಕರ್ತ ಉಗಮ ಶ್ರೀನಿವಾಸ್ ಅವರು 1996ರ ಲೋಕಸಭೆ ಚುನಾವಣೆಯಲ್ಲಿ 15 ಎಂಪಿ ಸ್ಥಾನ ಜನತಾದಳಕ್ಕೆ ಕೊಡಿ ಪಿ.ವಿ.ನರಸಿಂಹರಾವ್ ಅವರನ್ನೇ ಅಲುಗಾಡಿಸುವೇ ಎಂದು ಹೇಳಿ ನಂತರ ಪ್ರಧಾನಿಯಾದ ಚರಿತ್ರಾರ್ಹ ಘಟನೆಯನ್ನು ಸ್ಮರಿಸಿದರು. ಪಾರದರ್ಶಕ ಮಾಧ್ಯಮ ಸಂಸ್ಥೆಯ ನಿರ್ದೇಶಕ ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಎಂ.ಎಚ್.ನಾಗರಾಜ್, ಕೆ.ಚಂದ್ರಣ್ಣ, ರಂಗಮಣಿ ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಧ್ಯಕ್ಷ ಟಿ.ಆರ್.ನಾಗರಾಜು, ವಿಜಯ್ಗೌಡ, ಮಧು, ಶ್ರೀನಿವಾಸ್ ಸೇರಿದಂತೆ ಪಕ್ಷದ ಮುಖಂಡರು, ಸಾಹಿತಿಗಳು, ಚಿಂತಕರು ಸಭಿಕರಾಗಿ ಪಾಲ್ಗೊಂಡರು.