ಕಳಂಕ ಮುಕ್ತರಾದ ಕಾಂಗ್ರೆಸ್ಸಿಗರು..!! ದೇವೇಗೌಡರ ಕಣ್ಣೀರಿಗೆ ಕಾರಣ ಯಾರು ಗೊತ್ತಾ..?

ಡೆಸ್ಕ್
1 Min Read

ಇತ್ತಿಚೆಗೆ ಮಧುಗಿರಿ ಮತ್ತು ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ನನಗೆ ಕಣ್ಣೀರು ಹಾಕಿಸಿದವರು ಕಣ್ಣೀರು ಹಾಕುವಂತೆ ಮಾಡಿ ಎಂದು ಕರೆ ನೀಡಿದ್ದು ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು.

ಕಾಂಗ್ರೆಸ್ಸಿಗರು ಬೇಡ ಎಂದರು ತುಮಕೂರಿಗೆ ಕರೆದುಕೊಂಡು ಬಂದು ಸೋಲಿಸಿದರು ಎಂದು ಹೇಳಿಕೆ ನೀಡಿದ್ದ ಹೆಚ್.ಡಿ.ದೇವೇಗೌಡ ಅವರು ಪರೋಕ್ಷವಾಗಿ ಕಾಂಗ್ರೆಸ್ ಸೋಲಿಸುವಂತೆ ಕರೆ ನೀಡಿದ್ದ ಮೇಲೆ ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೇಶ್ವರ್ ಅವರು ದೇವೇಗೌಡರ ಕಣ್ಣೀರಿಗೆ ನಾನು ಕಾರಣವಲ್ಲ ಎಂದು ಹೇಳಿಕೆ ನೀಡಿದ್ದರು.

ಮಧುಗಿರಿಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ಅವರ ಮೇಲೆ ಆರೋಪ ಮಾಡಿದ್ದರು, ಲೋಕಸಭೆ ಚುನಾವಣೆಯನ್ನ ಹಾಲಿ ಶಾಸಕರು ಗಂಭೀರವಾಗಿ ಪರಿಗಣಿಸದೇ ಇದ್ದರಿಂದ ಮಧುಗಿರಿಯಲ್ಲಿ ಹೆಚ್ಚಿನ ಮತಗಳು ಬರಲಿಲ್ಲ ಎಂದು ತುಂಗೋಟಿ ರಾಮಣ್ಣ ಆರೋಪಿಸಿದ್ದರು.

ಆದರೆ ಈಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಲು ಕಾರಣ ಜೆಡಿಎಸ್ ನಲ್ಲಿಯೇ ಇದ್ದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬೆಳ್ಳಿಲೋಕೇಶ್ ಕಾರಣ ಎನ್ನುವ ರಹಸ್ಯವನ್ನು ಸ್ವತಃ ಜೆಡಿಎಸ್ ಮುಖಂಡರೇ ಹೊರಹಾಕಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಏಜೆಂಟ್ ಆಗಿದ್ದ ಬೆಳ್ಳಿಲೋಕೇಶ್ ಅವರ ಸಮರ್ಥತೆಯಿಂದಾಗಿ ಬೂತ್ ಗಳಲ್ಲಿ ಏಜೆಂಟ್ ಗಳಿಲ್ಲದೆ, ಜೆಡಿಎಸ್ ಸೋಲಲು ಕಾರಣವಾಯಿತು ಎಂಬ ಆರೋಪವನ್ನು ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾಡಿದ್ದಾರೆ.

ಜೆಡಿಎಸ್ ಮುಖಂಡರು ಹೇಳಿರುವಂತೆ ದೇವೇಗೌಡರ ಚುನಾವಣಾ ಏಜೆಂಟ್ ಆಗಿದ್ದ ಬೆಳ್ಳಿಲೋಕೇಶ್ ಅವರೇ ದೇವೇಗೌಡರ ಸೋಲಿಗೆ ಕಾರಣವಾಗುವ ಮೂಲಕ ಕಾಂಗ್ರೆಸ್ಸಿಗರನ್ನು ಕಳಂಕಮುಕ್ತರಾಗಿಸಿದ್ದಾರೆ.

 

Share this Article
Verified by MonsterInsights