ತುಮಕೂರು ನಗರದಲ್ಲಿ ಮುಸ್ಲಿಂ ಮತ ವಿಭಜನೆಗೆ ಮುಂದಾದ ಜೆಡಿಎಸ್..???

ಜೆಡಿಎಸ್ ನತ್ತ ಮಾಜಿ ಶಾಸಕ ಶಫೀ ಅಹಮದ್.???

ತುಮಕೂರು: ವಿಧಾನಸಭೆ ಚುನಾವಣೆ ಹತ್ತಿರವಾದಂತೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಶಫಿ ಅಹಮದ್ ಜೆಡಿಎಸ್ ನತ್ತ ವಾಲಿದ್ದು, ಶೀಘ್ರ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಅಳಿಯ ರಫೀಕ್ ಅಹಮದ್ ಅವರಿಗೆ ಟಿಕೆಟ್ ಸಿಗದೇ ಇದ್ದರಿಂದ ಬೇಸರಗೊಂಡಿದ್ದ ಅವರು ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಮಾಜಿ ಶಾಸಕ ಶಫೀ ಅಹಮದ್ ಮನೆಗೆ ಭೇಟಿ ನೀಡಿ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲು ಆಹ್ವಾನ ನೀಡಿದ್ದರು.

ಪ್ರಚಾರಕ್ಕಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತುಮಕೂರು ನಗರಕ್ಕೆ ಶೀಘ್ರ ಆಗಮಿಸಲಿದ್ದು, ಆಗಲೇ ಶಫೀ ಅಹಮದ್ ಅವರು ಜೆಡಿಎಸ್ ಪಕ್ಷ ಸೇರ್ಪಡೆಯಾಗಲು ಉದ್ದೇಶಿಸಿದ್ದು, ಮಾಜಿ ಶಾಸಕರನ್ನು ಪಕ್ಷಕ್ಕೆ ಕರೆ ತರಲು ಬೃಹತ್ ವೇದಿಕೆಯನ್ನು ಜೆಡಿಎಸ್ ಸಿದ್ಧ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮುಸ್ಲಿಂ ಮತಗಳ ವಿಭಜನೆ..?

ನಗರದಲ್ಲಿರುವ ಬಹುಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳನ್ನು ವಿಭಜಿಸಲು ಮಾಜಿ ಶಾಸಕ ಶಫೀ ಅಹಮದ್ ಅವರಿಗೆ ಗಾಳ ಹಾಕಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು, ಮುಸ್ಲಿಂ ಮತಗಳ ವಿಭಜನೆಯಿಂದ ಬಿಜೆಪಿಗೆ ಅವಕಾಶ ಕಲ್ಪಿಸಲು ಜೆಡಿಎಸ್ ಯತ್ನಿಸುತ್ತಿದೆ ಎನ್ನಲಾಗಿದೆ.

ಟಿಕೆಟ್ ಹಂಚಿಕೆಯಿಂದ ಬೇಸರಗೊಂಡಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಸಹ ಜೆಡಿಎಸ್ ಸೇರಿದ್ದಾರೆ, ಮೊದಲಿನಿಂದಲೂ ಮಾಜಿ ಶಾಸಕ ಶಫಿ ಅಹಮದ್ ಅವರನ್ನು ವಿರೋಧಿಸಿಕೊಂಡು ಬಂದಿದ್ದ ಅವರು ಜೆಡಿಎಸ್ ಸೇರ್ಪಡೆಗೊಂಡ ಬೆನ್ನಲ್ಲೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಶಫೀ ಅಹಮದ್ ಅವರ ಮನೆಗೆ ತೆರಳಿ ಆಹ್ವಾನ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ನಡೆಯಿಂದ ಬೇಸರಗೊಂಡಿರುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ವಕ್ಫ್ ಬೋರ್ಡ್ ಮಾಜಿ ಆಡಳಿತಾಧಿಕಾರಿ ನವೀದ್ ಬೇಗ್ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಮುಸ್ಲಿಂ ಸಮುದಾಯ ಮತಗಳ ಸೆಳೆಯಲು ಕಾಂಗ್ರೆಸ್, ಜೆಡಿಎಸ್ ಪೈಪೋಟಿ ನಡೆಸುತ್ತಿದೆ. ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಕಾಯುತ್ತಿದೆ.

Verified by MonsterInsights