ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿಧಾನ ಪ್ರಾರಂಭ
ತುಮಕೂರು: ಸಿದ್ದಗಂಗಾ ಮಠಕ್ಕೆ ನೂತನ ಪಟ್ಟಾಧಿಕಾರಿಗಳ ನೇಮಕ ಕಾರ್ಯಕ್ರಮ ಇಂದು ಸರಳವಾಗಿ ನಡೆಯಿತು, ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು.
ಸಿದ್ಧಗಂಗಾ ಮಠ, ಬಂಡೆ ಮಠ ಮತ್ತು ಬಸವ ಕಲ್ಯಾಣ ಮಠದ ಉತ್ತರಾಧಿಕಾರಿಗಳಾಗಿ ನೂತನವಾಗಿ ಆಯ್ಕೆಯಾಗಿರುವ ಮೂವರಿಗೂ ಇಂದು ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನಡೆಸಲಾಯಿತು.
ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ
ಇಂದು ಬಸವ ಜಯಂತಿ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು, ಶ್ರೀ ಮಠದ ಭಕ್ತಾದಿಗಳು, ಸಾರ್ವಜನಿಕರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿ
ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಪಟ್ಟಾಧಿಕಾರವನ್ನು ಸ್ವೀಕರಿಸಿದ ಮನೋಜ್ ಕುಮಾರ್ ಅವರಿಗೆ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮೀಜಿ ಎಂದು ಮರು ನಾಮಕರಣವನ್ನು ಮಾಡಲಾಗಿದೆ.
ಬೆಳಿಗ್ಗೆ ಸಿದ್ಧಲಿಂಗೇಶ್ವರ ದೇಗುಲದಲ್ಲಿ ಪೂಜೆ, ಧಾರ್ಮಿಕ ಕ್ರಿಯಾ ವಿಧಾನ, ಭಿಕ್ಷಾಟನೆ ಮೂಲಕ ವಟುವಾಗಿ ಸ್ವೀಕರಿಸಿದ ನಂತರ ಶ್ರೀ ಮಠದಲ್ಲಿ ಉತ್ತರಾಧಿಕಾರಿಯನ್ನು ಧಾರ್ಮಿಕ ಕ್ರಿಯೆಯ ಮೂಲಕ ಸ್ವೀಕರಿಸುವ ಮೂಲಕ ಶ್ರೀ ಶಿವಕುಮಾರಸ್ವಾಮೀಜೀಗಳ ಗದ್ದುಗೆಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು ಉತ್ತರಾಧಿಕಾರಿ ಶ್ರೀಶಿವಸಿದ್ದೇಶ್ವರ ಸ್ವಾಮೀಜಿಗಳ ಕೈ ಹಿಡಿದು ಕರೆ ತಂದರು.
ನಂತರದ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸಿದ್ಧಲಿಂಗಸ್ವಾಮೀಜಿಗಳು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶಯದಂತೆ ಶ್ರೀ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದ್ದು, ಭಕ್ತರು ಹಾಗೂ ಮಠದ ಹಿತೈಶಿಗಳು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಬೇಲಿಮಠದ ಶ್ರೀಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠದವ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಹರಗುರು ಶರಣರು ಭಾಗಿಯಾಗಿದ್ದರು.