ಉಪಚುನಾವಣೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಬಿಜೆಪಿ ಪಕ್ಷದ ಗೆಲುವಿಗೆ ದುಡಿದ ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಇಂದು ತಾವೇ ಗೆಲ್ಲಿಸಿದ ಶಾಸಕನ ಸೋಲಿಗೆ ಟೊಂಕ ಕಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಎಸ್.ಆರ್.ಗೌಡ ಅವರು ಮಾಜಿ ಸಚಿವ ಸತ್ಯನಾರಾಯಣ್ ಅವರ ಸಾವಿನಿಂದ ಎದುರಾದ ಉಪಚುನಾವಣೆಯಲ್ಲಿ ಡಾ.ಸಿ.ಎಂ.ರಾಜೇಶ್ ಗೌಡ ಅವರಿಗೆ ಟಿಕೆಟ್ ತ್ಯಾಗ ಮಾಡಿದರು. ಜೋಡೆತ್ತುಗಳಂತೆ ಸಿರಾ ಕ್ಷೇತ್ರದಾದ್ಯಂತ ಸುತ್ತಿ ಪ್ರಾಮಾಣಿಕವಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದರು.
ಪಕ್ಷ ಗೆದ್ದ ನಂತರ ನಿಗಮ ಮಂಡಳಿ ಅಧ್ಯಕ್ಷರು ಆದ ಎಸ್.ಆರ್.ಗೌಡ್ರು ಕಾಲ ಕ್ರಮೇಣ ಪಕ್ಷದಲ್ಲಿಯೇ ನಿರ್ಲಕ್ಷ್ಯಕ್ಕೆ ಒಳಗಾದರೂ, ಕಿಂಗ್ ಮೇಕರ್ ಆದರೂ ಸಹ ಪಕ್ಷದೊಳಗೆ ಕಡೆಗಣನೆ ಸಹಿಸಲಾಗದೇ ಬಿಜೆಪಿ ತೊರೆದು ಮಾತೃಪಕ್ಷ ಜೆಡಿಎಸ್ ಸೇರ್ಪಡೆಯಾದರು.
ಜೆಡಿಎಸ್ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದ ಎಸ್.ಆರ್.ಗೌಡ್ರಿಗೆ ವರಿಷ್ಠರು ಟಿಕೆಟ್ ನೀಡದೇ ಇದ್ದರು ಸಹ ಜೆಡಿಎಸ್ ಅಭ್ಯರ್ಥಿ ಗೆಲುವಿಗಾಗಿ ದುಡಿಯುತ್ತಿದ್ದಾರೆ ಅದಕ್ಕೆ ಮೂಲ ಕಾರಣ ಹಾಲಿ ಶಾಸಕರನ್ನು ಸೋಲಿಸಲೇಬೇಕೆಂಬ ಹಠ ಎನ್ನುವ ಮಾತುಗಳು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.