ಗೌರಿಶಂಕರ್ ಸ್ಪರ್ಧೆಗಿಲ್ಲ ಅಡ್ಡಿ.!!
2018ರ ವಿಧಾನಸಭಾ ಚುನಾವಣೆಯಲ್ಲಿ ನಕಲಿ ವಿಮಾ ಬಾಂಡ್ ಹಂಚುವ ಮೂಲಕ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಚುನಾವಣೆಯಲ್ಲಿ ನಕಲಿ ವಿಮಾ ಬಾಂಡ್ ಗಳನ್ನು ಹಂಚುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿ ಚುನಾವಣೆಯಲ್ಲಿ ಗೌರಿಶಂಕರ್ ಗೆಲುವು ಸಾಧಿಸಿದ್ದಾರೆ. ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಮಾಜಿ ಶಾಸಕ ಸುರೇಶ್ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಮಾ.30ರಂದು ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು. ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಿತ್ತು.
ಪ್ರಕರಣದ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಗ್ರಾಮಾಂತರ ಶಾಸಕ ಗೌರಿಶಂಕರ್ ಏ.10ರಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್ ಮತ್ತು ನ್ಯಾ.ಜೆ.ಕೆ.ಮಹೇಶ್ವರಿ ಅವರಿದ್ದ ಪೀಠ ತಡೆಯಾಜ್ಞೆಯನ್ನು ನೀಡಿದೆ.
ಗೌರಿಶಂಕರ್ ಅವರಿಗೆ ತಡೆಯಾಜ್ಞೆ ನೀಡದ ಬೆನ್ನಲ್ಲೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ, ಶಾಸಕ ಗೌರಿಶಂಕರ್, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಪರ ಘೋಷಣೆಗಳನ್ನು ಕೂಗಿದರು.