ಬಿಎಸ್ ವೈ ನಮ್ಮ ನಾಯಕ, ನನಗೆ ಬಿಜೆಪಿ ಟಿಕೆಟ್: ಸೊಗಡು ಶಿವಣ್ಣ

ತುಮಕೂರು: ಬಿಎಸ್ ಯಡಿಯೂರಪ್ಪ (B.S. yediyurappa) ನಮ್ಮ ನಾಯಕರು, ಅವರನ್ನು ಬಿಟ್ಟು ಏನು ಮಾಡೋಕೆ ಆಗಲ್ಲ, ಬಿ.ಎಸ್.ವೈ ಅವರನ್ನು ಹೊರಗೆ ಇಟ್ಟರೆ ಪಕ್ಷಕ್ಕೆ ಕಷ್ಟವಾಗಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ ವೈ ಶಿಕಾರಿಪುರದಿಂದ ಪಕ್ಷವನ್ನು ಕಟ್ಟಿ ರಾಜ್ಯಕ್ಕೆ ಹರಡಿದವರನ್ನು, ಅವರನ್ನು ಪಕ್ಷದಲ್ಲಿ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಾಗಿದ್ದಾರೆ, ಕೆಲ ವಿಚಾರದಲ್ಲಿ ಗೊಂದಲ ಉಂಟಾಗಿದೆ,  ಪಕ್ಷದ ಅಂತಿಮ ವರದಿಯ ಮೇಲೆ ಚುನಾವಣೆ ನಡೆಯಲಿದೆ, ಕ್ಷೇತ್ರದಲ್ಲಿ ಯಾರ ಬಲ ಎಷ್ಟು,  ಎಷ್ಟು ಜನಸ್ನೇಹಿ ಎನ್ನುವ ಮಾಹಿತಿ ಪಡೆದಿದ್ದಾರೆ ಎಂದರು.

ನಗರದಲ್ಲಿ ಯಾರ ಮನೆ ಬಾಗಿಲು ಜನರಿಗೆ ತೆಗೆದಿರುತ್ತದೆ, ಯಾರು ದೇವಸ್ಥಾನದಲ್ಲಿ ಇರುತ್ತಾರೆ, ದೇವಾಸ್ಥಾನದಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದು ವರಿಷ್ಠರ ಗಮನಕ್ಕೆ ಹೋಗಿದೆ. ಕೋವಿಡ್ ಸಂದರ್ಭದಲ್ಲಿ ಮುಂದೆ ನಿಂತು ಔಷಧಿಗಳನ್ನು ಹಂಚಿದ್ದೇನೆ, ಸತ್ತವರ ಶವ ಸಂಸ್ಕಾರ ಮಾಡಿದ್ದೇನೆ ಎಂದರು.

ಯಾವುದೇ ಸಂಧಾನಕ್ಕೂ ನಾನು ಒಪ್ಪುವುದಿಲ್ಲ, ಪಕ್ಷದ ವರಿಷ್ಠರು ಹಾಗೂ ಹಿತೈಶಿಗಳ ಸಲಹೆ ಮೇರೆಗೆ ಕೆಲಸ ಮಾಡುತ್ತೇನೆ, ಪಕ್ಷದಲ್ಲಿ ಬಂಡಾಯಕ್ಕೆ ಆಸ್ಪದವಿಲ್ಲ, ತುಮಕೂರಿನ ಜನರು ಬುದ್ಧಿವಂತರಿದ್ದಾರೆ, ಬಂಡಾಯಕ್ಕೆ ಬೆಲೆ ಕೊಡುವುದಿಲ್ಲ ಎಂದರು.
ಜೋಳಿಗೆ ಕೊಟ್ಟವರ ಪ್ರೀತಿಗಾಗಿ ನಿಲ್ಲುತ್ತೇನೆ, ದೇವಸ್ಥಾನಕ್ಕೆ ಹೋಗಿ ಜೋಳಿಗೆ ಹಿಡಿದಿದ್ದೇನೆ, ಪತ್ರಕರ್ತರು, ಬುದ್ಧಿಜೀವಿಗಳು ಜೋಳಿಗೆ ತುಂಬಿದ್ದಾರೆ, ತಾಕತ್ತಿದ್ದವರು ನನ್ನೊಂದಿಗೆ ಜೋಳಿಗೆ ಹಿಡಿದು ಬರಲಿ ನೋಡೋಣ, ಜನ ಯಾರಿಗೆ ಹಣ ಹಾಕುತ್ತಾರೆ ನೋಡೋಣ, ಜನ ಕೊಟ್ಟಿರುವ ಬಿಫಾರಂ ಜೋಳಿಗೆಯಲ್ಲಿದೆ ಎಂದರು.

ಬಿಜೆಪಿ ಪಕ್ಷ ಜನರು ಹೇಳುವುದನ್ನೇ ಕೇಳುತ್ತಾರೆ ಹೊರತು ಮುಖಂಡರ ಮಾತಿಗೆ ಮಣೆ ಹಾಕುವುದಿಲ್ಲ, ಪಕ್ಷದ ವರದಿಯಲ್ಲಿ ಸೊಗಡು ಶಿವಣ್ಣನ ಹೆಸರಿದೆ, ನನಗೆ ಟಿಕೆಟ್ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದರು.

ಮುಖಂಡ ಧನಿಯಾ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿದ್ದು ಸೊಗಡು ಶಿವಣ್ಣ ಅವರು ಮಾತ್ರ, ಕೊರೋನಾ ಸಂದರ್ಭದಲ್ಲಿ ಬೇರೆ  ನಾಯಕರು ಕಿಟಕಿ, ಬಾಗಿಲು ಹಾಕಿಕೊಂಡಿದ್ದರೆ, ಸೊಗಡು ಶಿವಣ್ಣ ಅವರು ಮಾತ್ರ ಸ್ಮಶಾನದಲ್ಲಿಯೂ ಇದ್ದರು, ಆಸ್ಪತ್ರೆಯಲ್ಲಿ ಓಡಾಡಿ ಚಿಕಿತ್ಸೆ ಕೊಡಿಸಿದರು ಎಂದರು.

ಶಾಸಕರಾಗಿದ್ದ ಅವಧಿಯಲ್ಲಿ ಸಾಮಾಜಿಕ ನ್ಯಾಯವನ್ನು ಪರಿಪಾಲಿಸುವ ಮೂಲಕ ಎಲ್ಲ ಜಾತಿಯವರಿಗೂ ಅಧಿಕಾರವನ್ನು ಹಂಚಿದರು, ಕುಟುಂಬ ರಾಜಕಾರಣ, ಸ್ವಜಾತಿ ಪ್ರೇಮವನ್ನು ತೋರಲಿಲ್ಲ, ಮಕ್ಕಳನ್ನು ರಾಜಕಾರಣಕ್ಕೆ ಬರಬೇಡಿ ಎನ್ನುವ ರಾಜಕಾರಣಿ ಸೊಗಡು ಶಿವಣ್ಣ ಎಂದರು.

ಎನ್.ಆರ್.ಕಾಲೋನಿ ಮುಖಂಡ ನರಸಿಂಹಯ್ಯ ಮಾತನಾಡಿ, ಮಾಜಿ ಸಚಿವ ಲಕ್ಷ್ಮೀನರಸಿಂಹಯ್ಯ ಅವರನ್ನು ಹೊರತು ಪಡಿಸಿ ಜನಸಾಮಾನ್ಯರೊಂದಿಗೆ ಇರುವ ಏಕೈಕ ರಾಜಕಾರಣಿ ಸೊಗಡು ಶಿವಣ್ಣ ಮಾತ್ರ, ಜಯಪುರದಲ್ಲಿ ಸ್ಮಶಾನ ವಿವಾದವಾದಾಗ ಖುದ್ದು ನಿಂತು ಸಮಸ್ಯೆ ಬಗೆಹರಿಸಿದರು, ಆದರೆ ಈಗ ಇರುವ ಕಾರ್ಪೊರೇಟ್ ಸಂಸ್ಕೃತಿಯ ಶಾಸಕರನ್ನು ಬದಲಿಸಬೇಕಿದೆ ಎಂದರು.

ಈ ವೇಳೆ ಮುಖಂಡರಾದ ರಂಗನಾಯ್ಕ್, ನರಸಿಂಹಯ್ಯ, ಧನಿಯಾಕುಮಾರ್, ಶಾಂತರಾಜು,ಜಯಸಿಂಹ, ಚೌಡಪ್ಪ, ಹರೀಶ್ ಸೇರಿದಂತೆ ಇತರರಿದ್ದರು.

Verified by MonsterInsights