ಮಾದಿಗ ಸಮುದಾಯದ ಒಲೈಕೆಗೆ ಮುಂದಾದ ಕಾಂಗ್ರೆಸ್
ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ನಲ್ಲಿ ಸೂಕ್ತ ಪ್ರಾತಿನಿಧ್ಯ, ಅಧಿಕಾರ ಸಿಗುತ್ತಿಲ್ಲ ಎಂಬ ಆರೋಪದ ಬೆನ್ನಲ್ಲೇ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡಿದೆ.
ಲೇಖಕರು: ಯೋಗೀಶ್
ಕಾಂಗ್ರೆಸ್ ಮಾದಿಗ ಸಮುದಾಯವನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಒಲೈಸುತ್ತದೆ, ಮತ ಪಡೆದ ನಂತರ ಸಂಪೂರ್ಣವಾಗಿ ನಿರ್ಲಕ್ಷಿಸುವುದು ವಾಡಿಕೆ, ಈಗ ಅದಕ್ಕೆ ಪೂರಕವಾಗಿ ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡುವ ಮೂಲಕ ಮಾದಿಗ ಸಮುದಾಯವನ್ನು ಒಲೈಸಲು ಮುಂದಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾದ ನಂತರ ಹೊಸದಾಗಿ ಸೃಜನೆಯಾದ ಕಾರ್ಯಾಧ್ಯಕ್ಷ ಹುದ್ದೆಗಳಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಿನೀಡಲಿಲ್ಲ, ಮಾದಿಗ ಸಮುದಾಯದ ಹಿರಿಯ ಮುಖಂಡರಾಗಿದ್ದ ಕೆ.ಎಚ್.ಮುನಿಯಪ್ಪ, ಎಚ್.ಆಂಜನೇಯ ನೇತೃತ್ವದಲ್ಲಿ ಮಾದಿಗ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು, ಇದೇ ಮನವಿಯನ್ನು ಹಿಡಿದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಾಗಲೂ ಮಾದಿಗ ಸಮುದಾಯಕ್ಕೆ ಅವಕಾಶ ಕಲ್ಪಿಸಲು ಮುಂದಾಗಲಿಲ್ಲ. ಮಾದಿಗ ಸಮುದಾಯದ ಕೂಗು ಅಕ್ಷರಶಃ ವರಿಷ್ಠರಿಗೆ ಕೇಳಿಸಲೇ ಇಲ್ಲ.
ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜ್ಯದಲ್ಲಿ ಮೀಸಲಿರುವ ಪರಿಶಿಷ್ಟ ಜಾತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಾದಿಗ ಸಮುದಾಯದವರಿಗೆ ಟಿಕೆಟ್ ನೀಡಿರುವ ಸಂಖ್ಯೆ ಬೆರಳೆಣಿಕೆಯಷ್ಟು, ಸ್ವತಃ ಈಗ ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವ ಬಿ.ಎನ್.ಚಂದ್ರಪ್ಪ ತುಮಕೂರು ಜಿಲ್ಲೆ ಪಾವಗಡದಿಂದ ಸ್ಪರ್ಧಿಸಲು ಬಯಸಿದರು ಟಿಕೆಟ್ ನೀಡಲಿಲ್ಲ.
ಸರಿ ಸುಮಾರು 52 ಸಾವಿರ ಮಾದಿಗ ಸಮುದಾಯದ ಮತದಾರರು ಇರುವ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಸ್ಪೃಶ್ಯರಿಗೆ ಅವಕಾಶ ನೀಡಲಾಯಿತು, ಐದು ಲಕ್ಷ ಮತದಾರರಿರುವ ಜಿಲ್ಲೆಯಲ್ಲಿ ಮೀಸಲಿರುವ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮಾದಿಗ ಸಮುದಾಯವನ್ನು ವ್ಯವಸ್ಥಿತವಾಗಿ ಅಧಿಕಾರದಿಂದ ದೂರ ಇಡುವ ಪ್ರಯತ್ನ ಮಾಡಿದ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಚುನಾವಣಾ ಸಮಯದಲ್ಲಿ ಮಾದಿಗ ಸಮುದಾಯಕ್ಕೆ ಪಕ್ಷದಲ್ಲಿ ಅಧಿಕಾರ ನೀಡಿದೆ.ಕಾಂಗ್ರೆಸ್ ಮಾದಿಗ ಸಮುದಾಯವನ್ನು ಬರೀ ವೋಟ್ ಬ್ಯಾಂಕ್ ಮಾಡಿಕೊಡಿದೆ ಎನ್ನುವುದಕ್ಕೆ ಇದಕ್ಕಿಂತ ಸೂಕ್ತ ನಿದರ್ಶನ ಇನ್ನೊಂದು ಸಿಗಲಾರದು, ಕಾಂಗ್ರೆಸ್ ಜಿಲ್ಲೆಯಲ್ಲಿ ಟಿಕೆಟ್ ನೀಡುವುದಿಲ್ಲ, ಅಧಿಕಾರವನ್ನು ನೀಡುವುದಿಲ್ಲ ಎನ್ನುವುದು ಸರ್ವವಿಧಿತವಾದಂತೆ ಇದೆ.
ರಾಜ್ಯದಲ್ಲಿ ಬಹುಸಂಖ್ಯಾತ ಪರಿಶಿಷ್ಟ ಜಾತಿಯಾಗಿರುವ ಮಾದಿಗ ಸಮುದಾಯವನ್ನು ಕಾಂಗ್ರೆಸ್ ಮೊದಲಿನಿಂದಲೂ ಅವಕಾಶ ವಂಚಿತರನ್ನಾಗಿಸಿರುವುದು ಸುಳ್ಳಲ್ಲ, 2018ರ ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯವೇ ಇರಲಿಲ್ಲ, ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಇರುವ ರಾಜಕೀಯ ಅಪ್ರಜ್ಞೆಯನ್ನು ಬಂಡವಾಳ ಮಾಡಿಕೊಂಡಿದ್ದರ ಫಲವಾಗಿ ಅಧಿಕಾರಕ್ಕಾಗಿ ಮಾದಿಗ ಸಮುದಾಯ ಸಂಪೂರ್ಣವಾಗಿ ಬಿಜೆಪಿ ಬೆಂಬಲಿಸುವಂತಾಗಿದೆ.
ರಾಜಕೀಯ ಅಧಿಕಾರಕ್ಕಿಂತ ಸಮುದಾಯವೇ ಮೊದಲು ಎನ್ನುವ ಭಾವನೆ ಮಾದಿಗರಲ್ಲಿ ಮೂಡುವವರೆಗೆ, ರಾಜಕೀಯವಾಗಿ ಸಂಘಟಿತವಾಗದಿದ್ದರೆ, ಧಾರ್ಮಿಕವಾಗಿ ಒಗ್ಗೂಡದಿದ್ದರೆ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಮುದಾಯ ಪ್ರಾತಿನಿಧ್ಯ ಗಳಿಸದೇ ಹೋದರೆ, ಸ್ವಾಭಿಮಾನ ಮೈಗೂಡಿಸಿಕೊಳ್ಳದಿದ್ದರೆ ಮಾದಿಗ ಸಮುದಾಯ ಇನ್ನಷ್ಟು ವರ್ಷಗಳ ಕಾಲ ವೋಟ್ ಬ್ಯಾಂಕ್ ಆಗಿಯೇ ಮುಂದುವರೆಯಬಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳು ಸಮುದಾಯದ ವಿದ್ಯಾವಂತರಲ್ಲಿ ಉಳಿದಿಲ್ಲ.